ಕರ್ನಾಟಕ

ಆಂತರಿಕ ಅಸಮಾಧಾನ; ಹೈಕಮಾಂಡ್ ಕೆಂಗಣ್ಣು; ಇಕ್ಕಟ್ಟಿನಲ್ಲಿ ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ರಾಜ್ಯದ ನಾಯಕರಿಂದ ಆಂತರಿಕವಾಗಿ ಅಸಮಾಧಾನ ಭುಗೆಲೇಳುತ್ತಿರುವ ಜೊತೆಗೆ ಪಕ್ಷದ ಹೈಕಮಾಂಡ್ ಕೂಡ ಮುಖ್ಯಮಂತ್ರಿಗಳ ಕೆಲ ನಡೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ವೀರಶೈವ-ಲಿಂಗಾಯತ ಸಮುದಾಯವನ್ನು ಒಬಿಸಿ ಸೇರಿಸುವ ವಿಚಾರಕ್ಕೆ ಹೈಕಮಾಂಡ್ ಕೆಂಗಣ್ಣು ಬೀರಿರುವುದು ತಿಳಿದುಬಂದಿದೆ. ಪಕ್ಷದ ವೇದಿಕೆಯಲ್ಲಿ, ಕೋರ್ ಕಮಿಟಿಯಲ್ಲಿ ಮತ್ತು ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸದೆಯೇ ನಿರ್ಧಾರ ಕೈಗೊಂಡಿದ್ಧಾರೆಂಬುದು ಹೈಕಮಾಂಡ್​ನ ಕೋಪಕ್ಕೆ ಕಾರಣವೆನ್ನಲಾಗಿದೆ. ಕೇಂದ್ರದಿಂದ ಕೆಲ ಪ್ರಭಾವಿ ನಾಯಕರು ಖುದ್ದಾಗಿ ಯಡಿಯೂರಪ್ಪಗೆ ಕರೆ ಮಾಡಿ ಈ ವಿಚಾರದಲ್ಲಿ ತರಾಟೆಗೆ ತೆಗೆದುಕೊಂಡರು. ಅದಾದ ನಂತರ ಯಡಿಯೂರಪ್ಪ ಅವರು ವೀರಶೈವ-ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸುವ ಪ್ರಸ್ತಾಪವನ್ನು ಕೈಬಿಟ್ಟರೆನ್ನಲಾಗಿದೆ.

ಆದರೆ, ಯಡಿಯೂರಪ್ಪ ತಾನು ದೆಹಲಿಗೆ ಹೋಗಿ ಕೇಂದ್ರ ನಾಯಕರನ್ನ ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದ್ದಾರೆ. ಈಗ ಆಗಿರುವ ಬೆಳವಣಿಗೆ ಅವರಿಗೆ ಮುಖಭಂಗವಾದಂತಾಗಿದೆ. ಹೈಕಮಾಂಡ್ ಮಟ್ಟದಲ್ಲಿ ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪಗೆ ಇದೇ ಮೊದಲ ಬಾರಿಗೆ ಈ ಹಿನ್ನಡೆ ಆಗಿರುವುದು ಎನ್ನಲಾಗುತ್ತಿದೆ.

ಇದೇ ವೇಳೆ, ಯಡಿಯೂರಪ್ಪ ಅವರಿಗೆ ಸಚಿವಾಕಾಂಕ್ಷಿಗಳ ಬಂಡಾಯದ ಭೀತಿ ಎದುರಾಗಿದೆ. ಅದರಲ್ಲೂ ಮೈತ್ರಿಪಾಳಯದಿಂದ ಸಿಡಿದು ಬಂದ 17 ಜನರ ಪೈಕಿ ಮಂತ್ರಿ ಆಗದೇ ಉಳಿದುಕೊಂಡಿರುವ ಆರ್ ಶಂಕರ್, ಎಂಟಿಬಿ ನಾಗರಾಜ್ ಮತ್ತು ಹೆಚ್ ವಿಶ್ವನಾಥ್ ಅವರಿಂದ ಒತ್ತಡ ಹೆಚ್ಚಾಗಿದೆ. ಕಾಕತಾಳೀಯವಾಗಿ ಈ ಮೂವರೂ ಕೂಡ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈಗ ಕುರುಬ ಸಮುದಾಯದ ಸ್ವಾಮೀಜಿಗಳೂ ಕೂಡ ಈ ಮೂವರು ಮುಖಂಡರ ಬೆನ್ನಿಗೆ ನಿಂತು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಮೂವರಿಗೆ ಸಚಿವ ಸ್ಥಾನ ಕೊಡುವುದರ ಜೊತೆಗೆ ಕುರುಬ ಸಮುದಾಯಕ್ಕೆ ಎಸ್​ಟಿ ಸ್ಥಾನಮಾನ ಕೊಡಬೇಕು. ನಿಗಮ ಸ್ಥಾಪನೆ ಮಾಡಿ 500 ಕೋಟಿ ಅನುದಾನ ಕೊಡಬೇಕು ಎಂದು ಇವರು ಒತ್ತಾಯಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದಕ್ಕೆ ಎಂಟಿಬಿ ನಾಗರಾಜ್, ಆರ್ ಶಂಕರ್ ಮತ್ತು ಹೆಚ್ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, ತ್ಯಾಗ ಮಾಡಿ ಬಿಜೆಪಿಗೆ ಬಂದಿರೋರಿಗೆ ಮೊದಲು ಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳು ನಮ್ಮನ್ನ ನೋಡಿದ ಕೂಡಲೇ ಎರಡು ಮೂರು ದಿನಗಳಲ್ಲಿ ಮಂತ್ರಿ ಮಾಡುತ್ತೇನೆ ಎಂತಾರೆ. ಆದರೆ, ಇನ್ನೂ ಕೂಡ ನಿರ್ಧಾರ ಮಾಡಿಲ್ಲ. ಅವರ ಪಕ್ಷದಲ್ಲಿ ಯಾರನ್ನ ಬೇಕಾದರೂ ಮಂತ್ರಿ ಮಾಡಲಿ. ಆದರೆ, ತ್ಯಾಗ ಮಾಡಿ ಬಂದಿರುವವರನ್ನ ಮೊದಲು ಸಂಪುಟಕ್ಕೆ ಸೇರಿಸಿಕೊಳ್ಳಲಿ. ಈ ಕೆಲಸವನ್ನ ಆಕದಷ್ಟು ಬೇಗ ಮಾಡಲಿ ಎಂದು ಎಂಟಿಬಿ ನಾಗರಾಜ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಆರ್ ಶಂಕರ್ ಮಾತನಾಡಿ, ಸಿಎಂ ಆದಷ್ಟೂ ಬೇಗ ಸಂಪುಟ ವಿಸ್ತರಣೆ ಮಾಡುತ್ತೇನೆಂದು ಹೇಳುತ್ತಲೇ ಬಂದಿದ್ದಾರೆ. ಅವರು ಮನಸು ಮಾಡಿದರೆ ಇವತ್ತೇ ಮಾಡಬಹುದು. ನಾವು ಕೂಡ ಬಹಳಷ್ಟು ನಿರೀಕ್ಷೆಯಲ್ಲಿದ್ದೇವೆ. ಅವರು ಬೇಗ ಸಂಪುಟ ವಿಸ್ತರಣೆ ಮಾಡಬೇಕು ಎಂದು ಅವರೂ ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಮೊದಲು ನಿಮ್ಮ ಊರು ಕಾಯಿರಿ, ಆಮೇಲೆ ದೇಶ ಕಾಯಿರಿ – ಸಿ.ಟಿ. ರವಿ ವಿರುದ್ಧ ಋಷಿಕುಮಾರ ಸ್ವಾಮೀಜಿ ಆಕ್ರೋಶ

ಇನ್ನು, ಹೆಚ್ ವಿಶ್ವನಾಥ್ ಮಾತನಾಡಿ, ಯಡಿಯೂರಪ್ಪ ಸಿಎಂ ಆಗಲು ಕಾರಣಕರ್ತರಾದವರಿಗೆ ಮಂತ್ರಿ ಮಾಡಬೇಕು. ನಾವು ಮೂವರಿಗೆ ಸಚಿವ ಸ್ಥಾನ ನೀಡಬೇಕು. ಹಾಗೆಯೇ, ಕುರುಬ ಅಭಿವೃದ್ಧಿ ಪ್ರಾಧಿಕಾರ ಮಾಡಬೇಕು. ಸಮುದಾಯವನ್ನು ಎಸ್​ಟಿ ಪಟ್ಟಿಗೆ ಸೇರಿಸಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ.

ವಿಶ್ವನಾಥ್, ಆರ್ ಶಂಕರ್ ಮತ್ತು ಎಂಟಿಬಿ ನಾಗರಾಜ್ ತಮ್ಮ ಬೇಡಿಕೆಗಳನ್ನಿಟ್ಟುಕೊಂಡು ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಪ್ರತ್ಯೇಕವಾಗಿ ಮಾತುಕತೆ ಕೂಡ ನಡೆಸಿದ್ದಾರೆ.

Comments are closed.