ಕರ್ನಾಟಕ

ವಿಜಯೇಂದ್ರನೇ ಉಪ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ- ಹಾಗಾದ್ರೆ ಮಂತ್ರಿಗಳು, ರಾಜ್ಯಾಧ್ಯಕ್ಷರು ಏನೂ ಅಲ್ಲ: ಬೇಳೂರು ಗೋಪಾಲಕೃಷ್ಣ

Pinterest LinkedIn Tumblr


ಶಿವಮೊಗ್ಗ:ವಿಜಯೇಂದ್ರನೇ ಉಪ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ ಅಂದರೆ ಪಕ್ಷದ ಸಂಘಟಕರು, ಮಂತ್ರಿಗಳು, ರಾಜ್ಯಾಧ್ಯಕ್ಷರು ಏನು ಇಲ್ಲ ಎಂಬಂತಾಯಿತು. ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿ ಗೆಲಿಸಿದ್ದಾರೆ. ವಿಜಯೇಂದ್ರ ಅವರು ಪೊಲೀಸ್ ವಾಹನದಲ್ಲಿ ಹಣ ತೆಗೆದುಕೊಂಡು ಹೋಗಿ ಶಿರಾದಲ್ಲಿ ಚುನಾವಣೆ ನಡೆಸಿ ರಾಜಕೀಯ ಮಾಡಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕೆಪಿಪಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅವರೇ ಚುನಾವಣೆ ಗೆಲ್ಲಿಸುತ್ತಿದ್ದಾರೆ ಎಂದರೆ, ಈಶ್ವರಪ್ಪ ಸೇರಿದಂತೆ, ಎಲ್ಲಾ ಮಂತ್ರಿಗಳು ಮನೆಯಲ್ಲಿ ಕುಳಿತುಕೊಳ್ಳಲಿ. ಉಳಿದವರೆಲ್ಲ ಕೈಯಲಾಗದವರು ಎಂದು ಒಪ್ಪಿಕೊಂಡಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು. ಇನ್ನು ಸಂಪುಟ ವಿಸ್ತರಣೆ ಸಂಬಂಧ ಬಿಜೆಪಿಯಲ್ಲಿ ಹೊಗೆಯಾಡುತ್ತಿದೆ. ಮೂಲ ಬಿಜೆಪಿ, ಹೊಸ ಬಿಜೆಪಿಯವರು ಎಂಬ ಮಾತು ಕೇಳಿ ಬರುತ್ತಿದೆ. ಮತ್ತೊಂದು ಉಪ ಚುನಾವಣೆ ಒಳಗೆ ಸಿ.ಎಂ ಇಳಿಯುವುದು ಖಚಿತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಹಳ ಜನ ನನಗೆ ಈ ಬಗ್ಗೆ ಹೇಳುತ್ತಾರೆ. ಸರ್ಕಾರ ಬಹಳ ಅಲ್ಲೋಡೋ ಪರಿಸ್ಥಿತಿ ಇದೆ. ತಮ್ಮ ಸ್ನೇಹಿತ ಶಾಸಕ ರೇಣುಕಾಚಾರ್ಯ ಪರ ಬ್ಯಾಟ್ ಬೀಸಿದರು, ರೇಣುಕಾಚಾರ್ಯ ನನ್ನ ಸ್ನೇಹಿತ ಅವರು ಈಗ ಸ್ಟ್ರಾಂಗ್ ಆಗಿದ್ದಾರೆ. ರೇಣುಕಾಚಾರ್ಯ ಕೈಹಾಕಿದ್ದಾರೆ ಎಂದರೆ ಅವರು ಸ್ಟ್ರಾಂಗ್ ಆಗೇ ಮಾಡುತ್ತಾರೆ ಎಂದರು.

ರೇಣುಕಾಚಾರ್ಯ ನನ್ನ ಸ್ನೇಹಿತ ಆತ ನನ್ನ ಬಳಿ ಹೇಳಿದ್ದನ್ನೆಲ್ಲಾ ನಾನು ಮಾಧ್ಯಮದ ಎದುರು ಹೇಳುವುದಿಲ್ಲ. ನಮ್ಮ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ, ಯಡಿಯೂರಪ್ಪನವರೇ ಸಿಎಂ ಇರಲಿ ಎಂಬ ಆಸೆ ನಮಗಿದೆ, ಆದರೆ, ಯಾವುದೇ ಶಾಸಕರಿಗೂ ಒಂದು ಪೈಸೆ ಹಣ ಅನುದಾನ ಬಿಡುಗಡೆ ಮಾಡಿಲ್ಲ. ಯಡಿಯೂರಪ್ಪ ತಮ್ಮ ಮಗನಿಗೆ ಮಾತ್ರ ಅನುದಾನ ಕೊಡುತ್ತಲೆ ಇದ್ದಾರೆ. ಈ ಸರ್ಕಾರದಲ್ಲಿ ಸಂಪೂರ್ಣ ಸಹಕಾರ ಸಿಕ್ಕಿದೆ ಅಂದರೆ ಅದು ಬಿಎಸ್ ವೈ ಕುಟುಂಬಸ್ಥರಿಗೆ ಮಾತ್ರ ಎಂದು ತಿಳಿಸಿದರು.

ರಾಜ್ಯ ಸರ್ಕಾರ ದಿವಾಳಿಯಾಗಿರುವುದನ್ನು ಸ್ವತಃ ಡಿಸಿಎಂ ಲಕ್ಷ್ಮಣ್ ಸವದಿಯವರೇ ಒಪ್ಪಿಕೊಂಡಿದ್ದಾರೆ. ಕೆ.ಎಸ್.ಆರ್.ಟಿ.ಸಿ ಸಿಬ್ಭಂದಿಗಳಿಗೆ ವೇತನ ನೀಡಲು ಆಗುತ್ತಿಲ್ಲ. ಈ ನಡುವೆ ಕೋಟಿಗಟ್ಟಲೇ ಹಣ ಖರ್ಚು ಮಾಡಿ, ಸಿ.ಎಂ ನಿಗಮಗಳನ್ನು ರಚಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿ.ಎಂ. ಯಡಿಯೂರಪ್ಪ ಹುಡುಗಾಟಿಕೆ ಆಡಲು ಹೊರಟಿದ್ದಾರೆ. ಒಂದೆರೆಡು ಸಮುದಾಯಗಳ ನಿಗಮ ಮಾಡುವುದು ಬೇಡ. ಲಿಂಗಾಯತರಿಗೆ, ಮರಾಠರಿಗೆ ನಿಗಮ ಮಾಡಿರುವುದು ಸಂತೋಷ. ಆದರೆ, ಬಾಕಿ ಸಮಾಜದವರು ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಉತ್ತರ ಕರ್ನಾಟಕ ಸೇರಿದಂತೆ ಹಲವೆಡೆ ಇನ್ನು ಅತಿವೃಷ್ಟಿ ಪರಿಹಾರ ನೀಡಿಲ್ಲ. ಆದರೆ ಕೋಟಿಗಟ್ಟಲೇ ಹಣ ಖರ್ಚು ಮಾಡಿ ನಿಗಮ ಸ್ಥಾಪಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

Comments are closed.