ರಾಷ್ಟ್ರೀಯ

ಗುಜರಾತ್ ನಂತೆ ಕೋಮು ಗಲಭೆ ಹರಡಲು ಬಿಡುವುದಿಲ್ಲ; ಮಮತಾ ಬ್ಯಾನರ್ಜಿ

Pinterest LinkedIn Tumblr


ಕೋಲ್ಕತ್ತಾ; “ಕೋಮು ಗಲಭೆ ಹರಡಲು ಇದು ಗುಜರಾತ್​ ಅಲ್ಲ ಬಂಗಾಳ. ಇಲ್ಲಿ ಕೋಮು ಗಲಭೆಗೆ ಜಾಗವಿಲ್ಲ ಮತ್ತು ನಾವು ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ” ಎಂದು ಬಿಜೆಪಿ ನಾಯಕರ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ಮುಂದಿನ ವರ್ಷ ಮಾರ್ಚ್​ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಬಾರಿ ಬಂಗಾಳದಲ್ಲಿ ಅಧಿಕಾರಕ್ಕೆ ಏರಲೇಬೇಕು ಎಂದು ಬಿಜೆಪಿ ಸಾಕಷ್ಟು ಕಸರತ್ತು ನಡೆಸುತ್ತಿದೆ. ಪಕ್ಷವನ್ನು ಬೂತ್​ ಮಟ್ಟದಿಂದ ಬೆಳೆಸುವ ಸಲುವಾಗಿ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಸಹ ಬಂಗಾಳದಲ್ಲಿ ರ್ಯಾಲಿಯನ್ನು ಆಯೋಜಿಸಿದ್ದರು. ಅಲ್ಲದೆ, ಮಮತಾ ಬ್ಯಾನರ್ಜಿ ಸರ್ಕಾರ ಕೊರೋನಾ ಕಾರಣಕ್ಕೆ ದುರ್ಗಾ ಪೂಜೆ ಮತ್ತು ಮೆರವಣಿಗೆಗೆ ಅವಕಾಶ ನೀಡದ ವಿಚಾರವನ್ನು ಕಟುವಾಗಿ ಟೀಕಿಸಿದ್ದರು. ಈ ಮೂಲಕ ಹಿಂದೂಗಳ ಧೃವೀಕರಣಕ್ಕೆ ಮುಂದಾಗಿದ್ದರು. ಆದರೆ, ಈ ಎಲ್ಲಾ ಟೀಕೆಗಳಿಗೆ ಮಮತಾ ಬ್ಯಾನರ್ಜಿ ಇಂದು ಪ್ರತ್ಯುತ್ತರ ನೀಡಿದ್ದಾರೆ.

ಇಂದು ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ನಾಯಕರ ನಡೆಯನ್ನು ತೀವ್ರ ಖಂಡಿಸಿ ಕಿಡಿಕಾರಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಬಂಗಾಳವನ್ನು ಗಲಭೆ ಪೀಡಿತ ಗುಜರಾತ್ ಆಗಿ ಪರಿವರ್ತಿಸಲು ನಾವು ಎಂದಿಗೂ ಅನುಮತಿಸುವುದಿಲ್ಲ. ಕೋಮು ಗಲಭೆಗಳನ್ನು ಹರಡಲು ಇದು ಗುಜರಾತ್​ ಅಲ್ಲ. ಅಲ್ಲದೆ, ಬಿಜೆಪಿ ಹೊರಗಿನವರ ಪಕ್ಷವಾಗಿದ್ದು, ಅದಕ್ಕೆ ರಾಜ್ಯದಲ್ಲಿ ಸ್ಥಾನವಿಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ರಾಜ್ಯಕ್ಕೆ ಬಂದು ರಾಜ್ಯದ ಶಾಂತಿಯನ್ನು ಭಂಗಗೊಳಿಸಲು ಪ್ರಯತ್ನಿಸುವವರಿಗೆ ರಾಜ್ಯದಲ್ಲಿ ಸ್ವಾಗತವಿಲ್ಲ” ಎಂದು ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದರೂ ಅದನ್ನು ಲೆಕ್ಕಿಸದೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿರುವ ಬಿಜೆಪಿ ನಾಯಕರ ಕುರಿತು ಕಿಡಿಕಾರಿರುವ ಮಮತಾ ಬ್ಯಾನರ್ಜಿ, “ದೇಶದ ಗಡಿಯಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ. ಆದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುನಾವಣೆಯಲ್ಲಿ ಏಕೆ ನಿರತರಾಗಿದ್ದಾರೆ” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

“ಬಿಜೆಪಿ ಇತ್ತೀಚೆಗೆ ಪಶ್ಚಿಮ ಬಂಗಾಳ ಚುನಾವಣೆ ಹಿನ್ನೆಲೆ, ರಾಜ್ಯವನ್ನು ಐದು ಸಾಂಸ್ಥಿಕ ವಲಯಗಳಾಗಿ ವಿಂಗಡಿಸಿ ಕೇಂದ್ರ ನಾಯಕರಿಗೆ ವಲಯಗಳ ಉಸ್ತುವಾರಿ ವಹಿಸಿದೆ. ಬಿಜೆಪಿ ಅವರು ಪಶ್ಚಿಮ ಬಂಗಾಳವನ್ನು ಗುಜರಾತ್ ಆಗಿ ಪರಿವರ್ತಿಸುವುದಾಗಿ ಹೇಳುತ್ತಿದ್ದಾರೆ. ನಮ್ಮ ಬಂಗಾಳವನ್ನು ಗುಜರಾತ್ ನಂತಹ ಗಲಭೆ ಪೀಡಿತ ಸ್ಥಳವನ್ನಾಗಿ ಮಾಡಲು ಅವರು ಏಕೆ ಬಯಸುತ್ತಾರೆ..? ನಮಗೆ ಗಲಭೆಗಳು ಬೇಡ ಶಂತಿ ಬೇಕು, ಅಭಿವೃದ್ಧಿ ಬೇಕು” ಎಂದು ಮಮತಾ ಬ್ಯಾನರ್ಜಿ ಪುನರುಚ್ಚರಿಸಿದ್ದಾರೆ.

ನಿನ್ನೆ ಸಹ ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದ ಮಮತಾ ಬ್ಯಾನರ್ಜಿ, “ಬಿಜೆಪಿ ಸುಳ್ಳಿನ ಕಸ ಮತ್ತು ರಾಷ್ಟ್ರದ ಅತಿದೊಡ್ಡ ಶಾಪ ಎಂದು ವಾಗ್ದಾಳಿ ನಡೆಸಿದ್ದರು. ಬಿಜೆಪಿ ನನ್ನನ್ನು ಬಂಧಿಸಲು ಧೈರ್ಯಮಾಡಿದರು ಕೂಡ, ಜೈಲಿನಿಂದಲೇ ಮುಂದಿನ ಚುನಾವಣೆಯನ್ನು ಎದುರಿಸಿ, ಟಿಎಂಸಿ ಪಕ್ಷವನ್ನು ಗೆಲ್ಲಿಸುತ್ತೇನೆ” ಎಂದು ಸವಾಲು ಹಾಕಿದ್ದರು.
ಪಶ್ಚಿಮ ಬಂಗಾಳ ಚುನಾವಣೆ ಮೇಲೆ ಕಣ್ಣೀಟ್ಟಿರುವ ಬಿಜೆಪಿ ಸರ್ಕಾರ ತೃಣಮೂಲ ಕಾಂಗ್ರೆಸ್ ಆಡಳಿತವನ್ನು ಗೂಂಡಾ ರಾಜ್‌ಗೆ ಹೋಲಿಸಿದೆ. ರಾಜ್ಯದಲ್ಲಿರುವ ಪೊಲೀಸ್ ಪಡೆ ಗೂಂಡಾ ರಾಜ್ ಸರ್ಕಾರದ ವಿರುದ್ದ ಏನೂ ಮಾಡುವುದಿಲ್ಲ ಎಂದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರತಿ ರ್‍ಯಾಲಿಯಲ್ಲೂ ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ.

Comments are closed.