ಕರ್ನಾಟಕ

ಶಿವಾಜಿ ಪೂರ್ವಜರು ಉತ್ತರ ಕರ್ನಾಟಕದವರು, ಬಂದ್ ಕೈ ಬಿಡಿ; ಗೋವಿಂದ ಕಾರಜೋಳ

Pinterest LinkedIn Tumblr


ವಿಜಯಪುರ; ರಾಜ್ಯದಲ್ಲಿರುವ ಮರಾಠ ಸಮುದಾಯದವರು ಕನ್ನಡಿಗರು. ಈ ಸಮುದಾಯದಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಅಭಿವೃದ್ಧಿಗಾಗಿ ಸಿಎಂ ಪ್ರಾಧಿಕಾರ ರಚಿಸಿದ್ದಾರೆಯೇ ಹೊರತು ಮರಾಠಿ ಭಾಷಾಭಿವೃದ್ಧಿಗೆ ಅಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದಲ್ಲಿ ಮಾತನಾಡಿದ ಅವರು, ಮರಾಠಿಗರು ಸಾವಿರಾರು ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಅವರು ಕನ್ನಡದಲ್ಲಿಯೇ ಓದುತ್ತಾರೆ, ಮಾತನಾಡುತ್ತಾರೆ. ಅವರು ಜಾತಿಯಿಂದ ಮರಾಠಿಗರಲ್ಲ. ನಾವು ಇತಿಹಾಸ ಗಮನಿಸಬೇಕು. ಛತ್ರಪತಿ ಶಿವಾಜಿ ಮಹಾರಾಜರು ಕೂಡ ಕರ್ನಾಟಕದವರು. ಅದರಲ್ಲಿಯೂ ಉತ್ತರ ಕರ್ನಾಟಕದವರು. ಗದಗ ಜಿಲ್ಲೆಯ ಸೊರಟೂರಿನವರು. ಶಿವಾಜಿ ಅವರ ಪೂರ್ವಜ ಬೆಳ್ಳಿಯಪ್ಪ ಅವರು ಸೊರಟೂರಿನಿಂದ ಮಹಾರಾಷ್ಟ್ರದ ಶಿಖರ ಸಿಗಣಾಪುರಕ್ಕೆ ಗುಳೆ ಹೋಗಿದ್ದಾರೆ. ಬರ ಬಿದ್ದ ಹಿನ್ನೆಲೆ ಅವರು ಗೋ ಸಂಪತ್ತನ್ನು ತೆಗೆದುಕೊಂಡು ಗುಳೆ ಹೋಗಿದ್ದರು. ಸೊರಟೂರಿನಿಂದ ಹೋಗುವಾಗ ಶಂಬು ಮಹಾದೇವನ ದೇವಸ್ಥಾನದಲ್ಲಿದ್ದ ಉದ್ಭವ ಲಿಂಗವನ್ನು ಪೂಜೆಗಾಗಿ ತೆಗೆದುಕೊಂಡು ಹೋಗಿದ್ದರು. ಅಲ್ಲದೇ, ಶಿಖರ ಸಿಗಣಾಪುರದ ಬೆಟ್ಟದ ಮೇಲೆ ದೇವಸ್ಥಾನ ನಿರ್ಮಿಸಿದ್ದಾರೆ. ಅಲ್ಲಿ ಕೆರೆ ಕಟ್ಟಿದ್ದಾರೆ ಎಂದು ತಿಳಿಸಿದರು.

ಶ್ರೀಶೈಲ ಮಲ್ಲಿಕಾರ್ಜುನನಗೆ ಶಂಭು ಮಹಾದೇವ ಎನ್ನುತ್ತಾರೆ. ಈಗ ಮರಾಠ ಸಮುದಾಯ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು, ಮರಾಠ ಸಮಾಜದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರ ಅಭಿವೃದ್ಧಿಗಾಗಿ ಮಾಡಲಾಗಿದೆ ಹೊತರು ಬೇರೆ ಉದ್ದೇಶದಿಂದ ಅಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.

ಇತಿಹಾಸ ಗೊತ್ತಿಲ್ಲದವರು ಹೇಳುವ ಮಾತಿಗೆ ಬೆಲೆ ಕೊಡಬೇಡಿ. ಡಿ. 5ರ ಬಂದ್ ಕೈಬಿಡಿ ಎಂದು ಮನವಿ ಮಾಡಿದ ಡಿಸಿಎಂ, 40 ವರ್ಷಗಳ ಹಿಂದೆಯೇ ಮಹಾರಾಷ್ಟ್ರದಲ್ಲಿ ಬಸವ ಜಯಂತಿ ಆಚರಿಸಲಾಗುತ್ತಿದೆ. ಈಗ ಸಿಎಂ ಸ್ಥಾಪಿಸಿರುವ ನಿಗಮ ಮರಾಠ ಭಾಷೆ ಅಭಿವೃದ್ಧಿ ನಿಗಮ ಅಲ್ಲ. ಅದು ಮರಾಠ ಸಮುದಾಯದ ಅಭಿವದ್ಧಿ ನಿಗಮವಾಗಿದೆ. ಮರಾಠಿಗರು ನಮ್ಮ ಅಣ್ಣ-ತಮ್ಮಂದಿರು. ಸಾವಿರಾರು ವರ್ಷಗಳಿಂದ ಅವರು ನಮ್ಮ ಜೊತೆಗೆ ಇದ್ದಾರೆ. ನಮ್ಮ ನೆಲ, ಜಲದ ವಿಷಯ ಬಂದಾಗ ಹೋರಾಟ ಮಾಡೋಣ. ಆದರೆ, ಇಂತಹ ಸಣ್ಣ ವಿಚಾರಗಳಿಗಳನ್ನು ಬೆಳೆಸಿ, ಮನಸ್ಸಿಗೆ ನೋವುಂಟು ಮಾಡುವ ಕೆಲಸವನ್ನು ಯಾರೂ ಮಾಡಬಾರದು. ಸರಕಾರ ಮಾಡಿರುವ ನಿಗಮಗಳು ಆ ಸಮುದಾಯದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಜನರನ್ನು ಮೇಲೆತ್ತಲು ನೆರವಾಗಲಿದೆ ಎಂದು ಅವರು ತಿಳಿಸಿದರು.

ಯತ್ನಾಳ ಕನ್ನಡಪರ ಸಂಘಟನೆಗಳ ಬಗ್ಗೆ ನೀಡಿರುವ ಹೇಳಿಕೆಗಳಿಗೆ ತಾವು ಪ್ರತಿಕ್ರಿಯೆ ನೀಡುವುದಿಲ್ಲ. ಯಡಿಯೂರಪ್ಪ ಅವರ ನಾಯಕತ್ವದಲ್ಲಿಯೇ ಸರ್ಕಾರ ಮುಂದುವರೆಯುತ್ತದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಬಿಜೆಪಿ ತಾಲೂಕಾಧ್ಯಕ್ಷ ಡಾ. ಪರಶುರಾಮ ಪವಾರ, ಮುದ್ದೆಬಿಹಾಳ ತಾ.ಪಂ. ಅಧ್ಯಕ್ಷೆ ಲಕ್ಷ್ಮೀಬಾಯಿ ಹವಾಲ್ದಾರ, ಬಿಜೆಪಿ ಮುಖಂಡರಾದ ಎಂ.ಎಸ್. ಪಾಟೀಲ, ಮಲಕೇಂದ್ರಗೌಡ ಪಾಟೀಲ, ನಿಂಗಪ್ಪಗೌಡ ಬಪ್ಪರಗಿ, ಸೋಮನಗೌಡ ಬಿರಾದಾರ, ಶಂಕರಗೌಡ ಹಿರೇಗೌಡರ ಆಲೂರ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ಕಾಶಿಬಾಯಿ ರಾಂಪೂರ, ಬಸವರಾಜ ಗುಳಬಾಳ, ಎಸ್.ಎಚ್. ಲೊಟಗೇರಿ, ಪಾವಡೆಪ್ಪಗೌಡ ಹವಾಲ್ದಾರ ಮುಂತಾದವರು ಉಪಸ್ಥಿತರಿದ್ದರು.

Comments are closed.