ಕರ್ನಾಟಕ

ಲಿಂಗಾಯತರ, ವೀರಶೈವರ ಅಭಿವೃದ್ದಿಗೋಸ್ಕರ 16% ಮೀಸಲಾತಿ ನೀಡಲಿ: ಸರಕಾರಕ್ಕೆ ಮುರುಘಾ ಶರಣರ ಆಗ್ರಹ

Pinterest LinkedIn Tumblr

ಚಿತ್ರದುರ್ಗ: ಲಿಂಗಾಯತ ವೀರಶೈವರಲ್ಲಿ ತಾತ್ವಿಕ ಬಿನ್ನಾಭಿಪ್ರಾಯ ಇರಬಹುದು, ಅದನ್ನು ಹೊರತುಪಡಿಸಿ ಮೀಸಲಾತಿಗಾಗಿ ಎಲ್ಲರೂ ಏಕಮುಖವಾಗಿ ಒಟ್ಟಾಗಿ ಹೋರಾಟ ಮಾಡಬೇಕು. ಪ್ರತ್ಯೇಕವಾಗಿ ವಿಭಜಿಸಿ ನೋಡುವ ಅಗತ್ಯವಿಲ್ಲ ಎಂದು ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.

ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪನೆ ಕುರಿತು ಸುದ್ದಿಘೋಷ್ಠಿ ನಡೆಸಿ ಮಾತನಾಡಿದ ಮುರುಘಾ ಶ್ರೀಗಳು, ರಾಜ್ಯದ ಬಿಜೆಪಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಸರ್ಕಾರ ಇಂದು ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪನೆಗೆ ಆದೇಶ ಮಾಡಿರುವುದು ಎಲ್ಲರಿಗೂ ಸಂತೋಷವನ್ನು ಉಂಟುಮಾಡಿದೆ. ಇದು ಸ್ವಾಗತಾರ್ಹ ಬೆಳವಣಿಗೆ. ಹಾಗಾಗಿ ಯಡಯೂರಪ್ಪನವರಿಗೆ, ಅವರ ಸರಕಾರಕ್ಕೆ ಧನ್ಯವಾದಗಳನ್ನ ಹೇಳುತ್ತಿದ್ದೇವೆ ಎಂದಿದ್ದಾರೆ.

ಇನ್ನೂ ವೀರಶೈವ ಲಿಂಗಾಯತ ಸಮಾಜದಲ್ಲಿ ಹಲವಾರು ವರ್ಷಗಳಿಂದ ಈ ಬೇಡಿಕೆ ಕೇಳಿ ಬರುತ್ತಿತ್ತು. ಇದು ಒಂದು ಹಂತವಾಗಿದೆ. ಇದರ ಜೊತೆಯಲ್ಲಿ, ಲಿಂಗಾಯತ ವೀರಶೈವರಲ್ಲಿ ಅನೇಕ ವಿಧದ ಬಡವರು, ಶೋಷಿತರು, ಆರ್ಥಿಕವಾಗಿ ಹಿಂದುಳಿದ ಜನರೂ ಇದ್ದಾರೆ. ಅವರ ಶೈಕ್ಷಣಿಕ, ಧಾರ್ಮಿಕ, ಅಭಿವೃದ್ದಿಗೆ ಎಲ್ಲಾ ರೀತಿಯ ಅನುಕೂಲತೆಗೆ, ಸೌಲಭ್ಯಕ್ಕೆ ಬೇರೆಯವರಿಗೆ ಕೊಡುವ ಮೀಸಲಾತಿ ದಿಸೆಯಲ್ಲಿ ನಮ್ಮ ಸಮಾಜಕ್ಕೂ ಕೊಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಹಾಗಾಗಿ ಲಿಂಗಾಯತ ವೀರಶೈವರು 16% ರಷ್ಟು ಮೀಸಲಾತಿ ಬೇಕು ಎಂದು ಹೇಳುತ್ತಿದ್ದಾರೆ.

ಈ ಸಮಾಜ, ಜನಾಂಗ, ಜಾತಿ,ಧರ್ಮದ ಜೊತೆಯಲ್ಲಿ ಉಪ ಜಾತಿಗಳೂ ಕೂಡಾ ಸೇರಿಕೊಂಡಿವೆ. ಜಾತಿಗೆ, ಉಪ ಜಾತಿಗೆ ಒಂದೊಂದು ಮೀಸಲಾತಿ ಕೊಡುವ ಬದಲಿಗೆ ಎಲ್ಲರಿಗೂ ಒಟ್ಟಾರೆಯಾಗಿ, ಲಿಂಗಾಯತರ, ವೀರಶೈವರ ಅಭಿವೃದ್ದಿಗೋಸ್ಕರ 16% ಮೀಸಲಾತಿ ಕೊಡಬೇಕು ಎಂಬುದು ಉಬಯ ತಂಡಗಳ ಆಶಯ. ಆದ್ದರಿಂದ ಮುಂದಿನ ದಿನ ದಿನಗಳಲ್ಲಿ ಸರ್ಕಾರ ಈ ನಿಟ್ಟಿನ ತೀರ್ಮಾನಕ್ಕೆ ಮುಂದಾಗಲಿ ಎಂದು ಒತ್ತಾಯ ಮಾಡಿದ್ದಾರೆ.

ಅಲ್ಲದೇ ರಾಜ್ಯದಲ್ಲಿನ ವೀರಶೈವರು ಲಿಂಗಾಯತರ ನಡುವೆ ತಾತ್ವಿಕ ಬಿನ್ನಾಭಿಪ್ರಾಯಗಳು ಇರಬಹುದು, ಆದರೆ ಅದನ್ನ ಹೊರತುಪಡಿಸಿ ಎಲ್ಲರೂ ಏಕಮುಖವಾಗಿ ಹೋರಾಟ ಮಾಡಬೇಕಾದ ಪ್ರಯತ್ನಗಳು ನಡೆಯಬೇಕಾಗುತ್ತದೆ. ಆ ದಿಸೆಯಲ್ಲಿ ಲಿಂಗಾಯತ ಎನ್ನುವುದನ್ನ ಪತ್ಯೇಕವಾಗಿ ವಿಭಜಿಸಿ ನೋಡುವ ಅಗತ್ಯವಿಲ್ಲ, ಎಲ್ಲರನ್ನೂ ಒಟ್ಟುಗೂಡಿಸಿ ಕೇಳುವ ಸಂದರ್ಭ ತಂದುಕೊಳ್ಳಬೇಕು. ಲಿಂಗಾಯತ, ವೀರಶೈವರನ್ನೂ ಒಳಗೊಂಡು ಜಾತಿ, ಉಪ ಜಾತಿಗಳನ್ನ ಸೇರಿಸಿ ಮೀಸಲಾತಿ ಕೊಡುವುದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಲ್ಲವಾದರೆ ಒಂದೊಂದು ಉಪ ಜಾತಿಯವರೂ ಮೀಸಲಾತಿಗಾಗಿ ಹೋರಾಟ ಶುರು ಮಾಡುತ್ತಾರೆ. ಅದು ಮುಗಿಯಲಾರದ ಕಥೆ, ವ್ಯಥೆ. ಆದ್ದರಿಂದ ಎಲ್ಲರೂ ಒಂದೇ ತತ್ವ ಸಮಾಜದ ಅಡಿಯಲ್ಲಿ ಹೋರಾಟ ಮಾಡಬೇಕಿದೆ. ಸರ್ಕಾರವೂ ಈ ರೀತಿಯ ಬೇಡಿಕೆಯನ್ನ ಗಂಬೀರವಾಗಿ ಪರಿಗಣಿಸಬೇಕು. ಲಿಂಗಾಯತದ ಜೊತೆಯಲ್ಲಿ ಹಡಪದ, ಮಡಿವಾಳ, ಕುಂಚಟಿಗರು, ಸಾದರು, ಒಕ್ಕಲಿಗ ಗೌಡರು, ಬಣಜಿಗರು, ಜಂಗಮರು ಸೇರಿದಂತೆ ಇನ್ನೂ ಬೇರೆ ಬೆರೆ ಜನಾಂಗದಲ್ಲಿಯೂ ಶೋಷಿತರಿದ್ದಾರೆ. ಅವರನ್ನ ಅದರಿಂದ ಹೊರಗಡೆ ತರಲು ಹಕ್ಕೊತ್ತಾಯ ನಡೆದರೆ ಸೂಕ್ತ ಎಂದಿದ್ದಾರೆ.

ಇನ್ನು, ಲಿಂಗಾಯತ ವೀರಶೈವರಲ್ಲಿನ ಉಪ ಜಾತಿಗಳಿಗೆ ಮೀಸಲಾತಿ ನೀಡಿದರೆ ಅದು ಹರಿದು ಹಂಚಿ ಹೋಗುತ್ತದೆ. ಎಲ್ಲರೂ ಸೇರಿ ಹಂಚಿಕೊಳ್ಳಬೇಕು, ಲಿಂಗಾಯತವನ್ನ ವಿಭಜಿಸಿ ನಾನು ಹೇಳುತ್ತಿಲ್ಲ ಎಂದಿದ್ದಾರೆ.

Comments are closed.