ಕರ್ನಾಟಕ

ಬೆಂಗಳೂರಿನಲ್ಲಿ ಡಿಸೆಂಬರ್ 7ರಿಂದ 15ರವರೆಗೆ ಚಳಿಗಾಲದ ಅಧಿವೇಶನ

Pinterest LinkedIn Tumblr

ಬೆಂಗಳೂರು: ಈ ಬಾರಿಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಡಿಸೆಂಬರ್ 7ರಿಂದ 15ರವರೆಗೆ ಬೆಂಗಳೂರಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಇಂದು ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಇದರ ತೀರ್ಮಾನ ಮಾಡಲಾಗಿದ್ದು, ವಿಧಾನಸೌಧದಲ್ಲೇ ಅಧಿವೇಶನ ನಡೆಯಲಿದೆ. ಇದೇ ವೇಳೆ, ವಿಜಯನಗರ ಪ್ರತ್ಯೇಕ ಜಿಲ್ಲೆಗೂ ಸಂಪುಟ ಅಸ್ತು ಎಂದಿದೆ. ಆದರೆ, ಜಿಲ್ಲೆಯ ರಚನೆ ಸಂಬಂಧ ಅಗತ್ಯ ಇರುವ ಪ್ರಕ್ರಿಯೆಗಳ ಬಗ್ಗೆ ಮುಂದಿನ ಸಂಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲೂ ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಆರಂಭದಲ್ಲಿ ಬೆಳಗಾವಿಯಲ್ಲಿ ನಡೆಸುವ ಚಿಂತನೆಯಿತ್ತು ಆದರೆ ಆರ್ಥಿಕ ಹಾಗೂ ಇತರೆ ಸಮಸ್ಯೆಗಳ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಇದೇ ವೇಳೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧ ಸ್ಪಷ್ಟೀಕರಣ ನೀಡಿದ ಅವರು, ಅದು ಮರಾಠ ಅಭಿವೃದ್ಧಿ ಪ್ರಾಧಿಕಾರವಲ್ಲ, ಸಮುದಾಯ ಅಭಿವೃದ್ದಿ ನಿಗಮವಾಗಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರದ ಹೆಸರು ಬದಲಾವಣೆಗೆ ನಿರ್ಧರಿಸಿದ್ದು, ಇನ್ನು ಮುಂದೆ ‘ಮರಾಠ ಸಮುದಾಯ ನಿಗಮ ‘ ಎಂದು ಬದಲಾವಣೆ ಯಾಗಲಿದೆ. ಮರಾಠ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಪ್ರಾಧಿಕಾರ ಮಾಡಬೇಕಾದರೆ ಕಾನೂನು ಮಾಡಬೇಕು.ಆದರೆ ನಿಗಮಕ್ಕೆ ಸರ್ಕಾರವೇ ನಿರ್ಧಾರ ಕೈಗೊಳ್ಳಬಹುದು. ಹಣ ಎಷ್ಟು ನಿಗದಿ ಮಾಡಬೇಕು ಎಂಬುದು ಇನ್ನೂ ಚರ್ಚೆಯಾಗಿಲ್ಲ. ಒಂದು ಸಮುದಾಯದ ಅಭಿವೃದ್ಧಿ ವಿಷಯದಲ್ಲಿ ಯಾಕೆ ವಿರೋಧ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೂ ಅಭಿವೃದ್ಧಿಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಪ್ರವಾಹ ಪೀಡಿತ ಜಿಲ್ಲೆಗಳಿಗೆ 1000 ಕೋಟಿ ರೂ. ಬಿಡುಗಡೆ ಮಾಡಲು ಸಂಪುಟ ತೀರ್ಮಾನಿಸಿದೆ. ನೆರೆ ಹಾಗೂ ಅತಿವೃಷ್ಠಿ ಸಂತ್ರಸ್ಥರ ಪರಿಹಾರ ಕಾಮಗಾರಿ ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ. ಎಸ್‍ಸಿ- ಎಸ್‍ಟಿ ಮೀಸಲಾತಿ ಹೆಚ್ಚಳ ಸಂಬಂಧ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲಾಗುತ್ತದೆ. ಒಂದು ವಾರದಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ. ಸಮಿತಿ ವರದಿ ಆಧರಿಸಿ ಮೀಸಲು ಹೆಚ್ಚಳ ಮಾಡಲಾಗುತ್ತದೆ ಎಂದರು. ಸಮಿತಿಯ ಸದಸ್ಯರನ್ನು ಮುಖ್ಯಮಂತ್ರಿ ಅವರು ನೇಮಕ ಮಾಡಲಿದ್ದು ಒಂದೆರಡು ದಿನಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ ಎಂದು ಅವರು ಹೇಳಿದರು.

ಕೃಷ್ಣಾ ಭಾಗ್ಯ ಜಲ ನಿಗಮ,ಕಾವೇರಿ ಅಭಿವೃದ್ಧಿ ನಿಗಮ ಮತ್ತು ವಿಶ್ವೇಶ್ವರಯ್ಯ ಅಭಿವೃದ್ಧಿ ನಿಗಮಕ್ಕೆ 1600 ಕೋಟಿ ರೂ. ಸಾಲ ಪಡೆಯಲು ಅನುಮತಿ ನೀಡಲಾಗಿದೆ. ಹೊಸಪೇಟೆಯಲ್ಲಿ 13 ಕೋಟಿ ಅಂದಾಜು ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು. ಸಾಲಿನಲ್ಲಿ 21 ಸಾರ್ವತ್ರಿಕ ರಜೆ ಮತ್ತು19 ನಿರ್ಬಂಧಿತ ರಜೆ ನೀಡಲು ಅನುಮೋದನೆ ಸಿಕ್ಕಿದ್ದು, ಲೋಕಸೇವಾ ಆಯೋಗದ ಅನುಮತಿ ಇಲ್ಲದೆ ಸರ್ಕಾರಿ ನೌಕರರ ಮೇಲೆ ಕ್ರಮ ಕೈಗೊಳ್ಳಲು ನಿಯಮಾವಳಿ ತಿದ್ದುಪಡಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

Comments are closed.