ಕರ್ನಾಟಕ

ಮತ್ತೊಮ್ಮೆ ಯಡಿಯೂರಪ್ಪ ಅವರನ್ನು ಭೇಟಿಯಾದ ಕುಮಾರಸ್ವಾಮಿ: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮಾಜಿ ಸಿಎಂ ಕುಮಾರಸ್ವಾಮಿ ಭೇಟಿಯಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳುವಂತಾಗಿದೆ.

ಸೆಪ್ಟೆಂಬರ್‌ನಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲೆ ಸಿಎಂ ಬಿಎಸ್‌ವೈ ಅವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದರು. ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಉಭಯರ ನಡುವೆ ಮಾತುಕತೆ ನಡೆದಿತ್ತು. ಅಧಿವೇಶನ ನಡೆಯುವಾಗ ವಿಧಾನಸೌಧದ ಸಿಎಂ ಕೊಠಡಿಯಲ್ಲೂ ಇಬ್ಬರು ನಾಯಕರು ಮುಖಾಮುಖಿಯಾಗಿದ್ದರು. ಆಗಲೇ ಬಿಎಸ್‌ವೈ ಮತ್ತು ಎಚ್‌ಡಿಕೆ ನಡುವೆ ಬಾಂಧವ್ಯ ಸುಧಾರಣೆಯಾಗುತ್ತಿದೆ. ಅಗತ್ಯ ಕಂಡರೆ ಇದು ಮುಂದಿನ ಹಂತಕ್ಕೆ ಹೋಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಕಳೆದ ಕೆಲ ತಿಂಗಳಿಂದ ಬಿಎಸ್‌ವೈ ವಿರುದ್ಧ ಕುಮಾರಸ್ವಾಮಿ ಅಂತಹ ಟೀಕೆ ಮಾಡಿಲ್ಲ. ಅಧಿವೇಶನದಲ್ಲಿ ಮಹತ್ವದ ವಿಧೇಯಕ ಪಾಸಾಗಲು ಎಚ್‌ಡಿಕೆ ಬೆಂಬಲಿಸಿದ್ದರು. ಇದಕ್ಕಾಗಿ ಸಿಎಂ ಅವರೂ ಕೃತಜ್ಞತೆ ಸಲ್ಲಿಸಿದ್ದರು. ಇದರ ಮಧ್ಯೆ ಶಿರಾ, ಆರ್‌ಆರ್‌ನಗರ ಉಪ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಮಧ್ಯೆ ಮ್ಯಾಚ್‌ ಫಿಕ್ಸಿಂಗ್‌ ಆಗಿರುವುದಾಗಿ ಕಾಂಗ್ರೆಸ್‌ ನಾಯಕರು ಆರೋಪಿಸಿದ್ದರು.

ರಾಜಕೀಯ ವಿರೋಧಿಗಳ ಟೀಕೆಗೆ ತಿರುಗೇಟು ನೀಡಿದ್ದ ಕುಮಾರಸ್ವಾಮಿ, ಪಕ್ಷದ ಶಾಸಕರ ಕ್ಷೇತ್ರದ ಅಭಿವೃದ್ಧಿ ಸಂಬಂಧ ಸಿಎಂ ಅವರನ್ನು ಭೇಟಿ ಮಾಡಲಾಗಿತ್ತು ಎಂದಿದ್ದರು. ಜೆಡಿಎಸ್‌ ಶಾಸಕರೂ ಇದೇ ವಿಚಾರವನ್ನು ಪುನರುಚ್ಚರಿಸಿದ್ದರು. ಈ ಹಂತದಲ್ಲಿಕುಮಾರಸ್ವಾಮಿ 20 ನಿಮಿಷ ಸಿಎಂ ಜತೆ ಸಮಾಲೋಚಿಸಿರುವುದೂ ಕುತೂಹಲಕ್ಕೆ ಕಾರಣವಾಗಿದೆ.

ಶಾಸಕ ಪುಟ್ಟರಾಜು ಕ್ಷೇತ್ರ, ರಾಮನಗರ, ಚನ್ನಪಟ್ಟಣ ಸೇರಿದಂತೆ ಜೆಡಿಎಸ್‌ ಶಾಸಕರು ಇರುವ ಇತರ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡುವ ಬಗ್ಗೆಯೂ ಕುಮಾರಸ್ವಾಮಿ ಪ್ರಸ್ತಾಪಿಸಿದರೆನ್ನಲಾಗಿದೆ.

Comments are closed.