ಕರ್ನಾಟಕ

ಶಿವಮೊಗ್ಗ ಜಿಲ್ಲೆಯಲ್ಲಿ ಭೂತಾಯಿಗೆ ಸೀಮಂತ ಮಾಡಿದ ರೈತಾಪಿ ವರ್ಗ

Pinterest LinkedIn Tumblr


ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ರೈತಾಪಿ ವರ್ಗ ಭೂಮಿ ಹುಣ್ಣಿಮೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಭೂ ತಾಯಿ ಈ ಸಮಯದಲ್ಲಿ ಗರ್ಭೀಣೆಯಂತೆ ಬೆಳೆಗಳಿಂದ ಮೈತುಂಬಿ ಕೊಂಡಿರುತ್ತಾಳೆ. ಹೀಗಾಗಿ ರೈತರು ಭೂ ತಾಯಿಗೆ ಗರ್ಭೀಣಿಯ ಸ್ಥಾನದಲ್ಲಿಟ್ಟು, ಆಕೆಗೆ ಸೀಮಂತದ ಸಂಭ್ರಮದಂತೆ ಪೂಜೆ ಸಲ್ಲಿಸುತ್ತಾರೆ. ಭೂ ತಾಯಿಯ ಬಯಕೆಗಳನ್ನು ಈಡೇರಿಸುವ ಸೀಮಂತದ ಸಂಭ್ರಮ, ಭೂಮಿಯಲ್ಲಿ ಉತ್ತಿ ಬಿತ್ತಿದ ಬೆಳೆಗಳು ಕಾಳು ಕಟ್ಟುವ ಸಮಯ ಇದಾಗಿದ್ದು, ಭೂ ತಾಯಿ ಗರ್ಭೀಣಿಯೆಂಬ ನಂಬಿಕೆಯಿಂದ ಅವಳ ಬಯಕೆಗೆ ಅನುಗುಣವಾಗಿ ಉಡಿ ತುಂಬುತ್ತಾರೆ. ಭೂಮಿ ಹುಣ್ಣಿಮೆ ಮಲೆನಾಡಿನ ರೈತರ ಪಾಲಿಗೆ ಸಂಭ್ರಮದ ಹಬ್ಬ. ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭೂಮಿ ಹುಣ್ಣಿಮೆ ಹಬ್ಬ ಹೆಚ್ಚು ಪ್ರಚಲಿತದಲ್ಲಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗ ಸಮುದಾಯದಲ್ಲಿ ಈ ಸಂಪ್ರದಾಯ ವಿಶಿಷ್ಟವಾಗಿದೆ.

ಬೇರೆ ಕಡೆಗಳಲ್ಲಿ ವಿಭಿನ್ನ ಹೆಸರುಗಳಿಂದ ಹಬ್ಬ ಆಚರಿಸಲ್ಪಡುತ್ತದೆ. ವರ್ಷವಿಡಿ ಭೂಮಿಯಲ್ಲಿ ಉತ್ತಿ ಬಿತ್ತಿ ಬೆಳೆದು ಅನ್ನದಾತ ಎನಿಸಿಕೊಂಡಿರುವ ರೈತನಿಗೆ ಭೂಮಿ ಬರೀ ಮಣ್ಣಲ್ಲ, ಭೂಮಿ ಫಲವತ್ತತೆಯ ಸಂಕೇತ. ಭೂಮಿ ಹುಣ್ಣಿಮೆ ಸಂದರ್ಭದಲ್ಲಿ ಹೊಲ ಗದ್ದೆಗಳಲ್ಲಿ ಬಿತ್ತಿದ ಬೆಳೆಗಳು ತೆನೆಗಳಾಗಿ, ಕಾಳು ಗಟ್ಟಿಯಾಗುವ ಹಂತದಲ್ಲಿರುತ್ತದೆ, ಅಷ್ಟೇ ಅಲ್ಲದೆ ಅಡಿಕೆ, ತೆಂಗು, ಬಾಳೆ ಸೇರಿದಂತೆ ವಿವಿಧ ಬೆಳೆಗಳ ಫಸಲು ಚೆನ್ನಾಗಿ ಬಂದಿರುತ್ತದೆ. ಈ ಸಂದರ್ಭದಲ್ಲಿ ಭೂ ತಾಯಿ ಗರ್ಭೀಣಿ ಎಂಬ ನಂಬಿಕೆಯಲ್ಲಿ ರೈತಾಪಿ ವರ್ಗ ಪುರಾತನ ಕಾಲದಿಂದಲೂ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ ಭೂಮಿತಾಯಿಗೆ ಅಂತಲೇ ಬಗೆ ಬಗೆಯ ಅಡುಗೆಗಳನ್ನು ಮಾಡುತ್ತಾರೆ. ಅವುಗಳನ್ನು ಬೆತ್ತ ಮತ್ತು ಬಿದಿರಿನ ಬುಟ್ಟಿಯಲ್ಲಿ ಮನೆಯಿಂದ ತುಂಬಿಕೊಂಡು ಪೂಜೆ ಮಾಡುವ ಸ್ಥಳಕ್ಕೆ ಮನೆಯ ಯಜಮಾನ ತಲೆಯ ಮೇಲೆ ಹೊತ್ತುಕೊಂಡೊಯ್ಯುವುದ ಸಂಪ್ರಾದಯ.

ಕೆಲವರು ಭತ್ತದ ಗದ್ದೆಯಲ್ಲಿ ಭತ್ತದ ಗಿಡಗಳಿಗೆ ಪೂಜೆ ಮಾಡಿದರೆ, ಅಡಿಕೆ ತೋಟ ಇರುವವರು ಅಡಿಕೆ ಮರಕ್ಕೆ ಸೀರೆಯನ್ನು ಉಡಿಸಿ, ಆಭರಣಗಳನ್ನು ಧರಿಸಿ ಶೃಂಗಾರ ಮಾಡಿರುತ್ತಾರೆ. ಕುಟುಂಬಸ್ಥರಲ್ಲೇ ಸೇರಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ದೇವರುಗಳಿಗೆ ಹಾಗೂ ಭೂಮಿ ತಾಯಿಗೆ ಬಗೆ ಬಗೆಯ ಅಡುಗೆಗಳನ್ನು ನೈವೇದ್ಯ ಮಾಡಿ ಒಂದು ಎಡೆಯನ್ನು ಗದ್ದೆಯಲ್ಲಿ ಇಟ್ಟು, ಭೂಮಿ ತಾಯಿಯ ಬಳಿ ಉತ್ತಮ ಫಸಲನ್ನು ನೀಡಿ ನಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೊಳ್ಳುತ್ತಾರೆ.

ಬುಟ್ಟಿಯಲ್ಲಿ ತಂದಿದ್ದ ಊಟವನ್ನು ಮನೆಮಂದಿಯಲ್ಲಾ ಗದ್ದೆಯಲ್ಲಿ ಕುಳಿತು ಸಾಮೂಹಿಕವಾಗಿ ಹಬ್ಬದೂಟ ಮಾಡುತ್ತಾರೆ. ಶ್ರದ್ಧಾ ಭಕ್ತಿಯಿಂದ ಅರ್ಥಪೂರ್ಣವಾಗಿ ಭೂಮಿಯ ಸೀಮಂತ ಮಾಡಿ, ವರ್ಷವಿಡಿ ಉತ್ತಮ ಫಸಲನ್ನು ನೀಡಲಿ ಎಂದು ಪ್ರಾರ್ಥಿಸುತ್ತಾರೆ. ವರ್ಷವಿಡಿ ಅನ್ನ ನೀಡುವ ಭೂ ತಾಯಿಗೆ ಸೀಮಂತ ಕಾರ್ಯ ಮಾಡಿದ ಸಾರ್ಥಕ ಭಾವ ರೈತ ವರ್ಗದಲ್ಲಿದೆ.

Comments are closed.