ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತದಿಂದ ಚೆನ್ನೈ ನಗರ ಸೇರಿ ತಮಿಳುನಾಡಿನ ಹಲವೆಡೆ ಮಳೆಯಾಗುತ್ತಿದೆ. ಅಲ್ಲಿ ಮುಂಗಾರು ಕೂಡ ಅಡಿ ಇಟ್ಟಿದೆ. ಚಂಡಮಾರುತದ ಪರಿಣಾಮವಾಗಿ ಬೆಂಗಳೂರಿನಲ್ಲೂ ಇಂದು ಮತ್ತು ನಾಳೆ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂದು ಸಂಜೆಯಿಂದ ನಾಳೆಯವರೆಗೆ ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಟ್ಟದವರೆಗೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯ ಮಾಹಿತಿ ನಿರ್ದೇಶಕ ಪಾಟೀಲ್ ಅವರು ಮುನ್ಸೂಚನೆ ನೀಡಿದ್ದಾರೆ.
ಇಂದು ಮತ್ತು ನಾಳೆ, ಅಂದರೆ ಅಕ್ಟೋಬರ್ 29 ಮತ್ತು 30ರಂದು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವನೀಯತೆ ಇದೆ. ಇಲ್ಲಿ ಬಿಟ್ಟರೆ ರಾಜ್ಯದ ಬೇರೆಡೆ ಈ ಎರಡು ದಿನ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ.
ಕರಾವಳಿ ಭಾಗದಲ್ಲಿ ಅ. 30 ಮತ್ತು 31ರಂದು ಅಲ್ಲಲ್ಲಿ ಮಳೆಯಾಗಲಿದೆ. ನವೆಂಬರ್ 1 ಮತ್ತು 2ರಂದು ಕರಾವಳಿಯ ಬಹುತೇಕ ಭಾಗಗಳಲ್ಲಿ ಮಳೆಯಾಗಲಿದೆಯಂತೆ.
ಇನ್ನು, ಉತ್ತರ ಒಳನಾಡಿನಲ್ಲಿ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ನವೆಂಬರ್ 1 ಮತ್ತು 2ರಂದು ಹಗುರದಿಂದ ಸಾಧಾರಣ ಮಟ್ಟದವರೆಗೆ ಮಳೆ ಬೀಳುವ ಸಾಧ್ಯತೆ ದಟ್ಟವಾಗಿದೆ.
ದಕ್ಷಿಣ ಒಳನಾಡಿನಲ್ಲಿ ಅ. 29 ಮತ್ತು 30ರಂದು ಅಲ್ಲಲ್ಲಿ ಮಳೆಯಾಗಬಹುದು. ಅ. 31ರಿಂದ ನ. 2ರವರೆಗೆ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಈಗಿನ ಸಿನಾಪ್ಟಿಕ್ಸ್ ಸ್ಥಿತಿ: ಸೈಕ್ಲೋನಿಕ್ ಸರ್ಕುಲೇಶನ್ ಉತ್ತರ ತಮಿಳುನಾಡು, ದಕ್ಷಿಣ ಆಂಧ್ರ ಪ್ರದೇಶದ ಕರಾವಳಿಯಲ್ಲಿದ್ದು, 3.6 ಕಿ.ಮೀ. ಎತ್ತರದವರೆಗೆ ಇದೆ.