ಕರ್ನಾಟಕ

ಕೈಯಲ್ಲಿ ಮಗು ಎತ್ತಿ ಹಿಡಿದು ಕೆಂಡದ ಮೇಲೆ ನಡೆದಾಡಿದ ಅರ್ಚಕ!

Pinterest LinkedIn Tumblr


ಹಾವೇರಿ: ಹಾವೇರಿ ಜಿಲ್ಲೆಯ ಬುಳ್ಳಾಪುರ ಗ್ರಾಮದಲ್ಲಿ ನಡೆಯುವ ದುರ್ಗಾದೇವಿ ಜಾತ್ರೆಯಲ್ಲಿ ಅರ್ಚಕರೊಬ್ಬರು ಮಗುವನ್ನು ಎಡಗೈಲಿ ಎತ್ತಿ ಹಿಡಿದು, ಬಿಸಿ ಕೆಂಡದ ಮೇಲೆ ನಡೆದಿರುವ ವಿಡಿಯೋ ವೈರಲ್ ಆಗಿದೆ. ಹರಕೆಯ ಹೆಸರಿನಲ್ಲಿ ಎಳೆ ಮಗುವನ್ನು ಹಿಡಿದುಕೊಂಡು ಕೆಂಡ ಹಾಯ್ದಿರುವ ಅರ್ಚಕರ ವಿರುದ್ಧ ಭಾರೀ ಆಕ್ರೋಶವೂ ವ್ಯಕ್ತವಾಗಿದೆ.

ಹಾವೇರಿ ಜಿಲ್ಲೆಯ ಬುಳ್ಳಾಪುರ ಗ್ರಾಮದ ಐತಿಹಾಸಿಕ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿವರ್ಷ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿ ಕೂಡ ದಸರಾ ಉತ್ಸವ ಆಚರಿಸಲಾಗಿತ್ತು. ಈ ಉತ್ಸವದಲ್ಲಿ ಕೆಂಡ ಹಾಯುವುದು ಇಲ್ಲಿನ ಪದ್ಧತಿ. ಈ ವರ್ಷ ದುರ್ಗಾದೇವಿ ದೇವಸ್ಥಾನದ ಅರ್ಚಕ ಬಸವರಾಜಪ್ಪ ಸ್ವಾಮಿ ಹಸುಗೂಸನ್ನು ಎಡಗೈಲಿ ಎತ್ತಿ ಹಿಡಿದುಕೊಂಡು ಬಿಸಿ ಕೆಂಡದ ಮೇಲೆ ನಡೆದಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಮಗುವಿನ ಪೋಷಕರು ತಮ್ಮ ಹರಕೆ ತೀರಿಸಲು ಈ ರೀತಿ ತಮ್ಮ ಮಗುವನ್ನು ಹಿಡಿದುಕೊಂಡು ಕೆಂಡದ ಮೇಲೆ ನಡೆಯಲು ಅರ್ಚಕರ ಬಳಿ ಮನವಿ ಮಾಡಿದರು ಎನ್ನಲಾಗಿದೆ. ಮಗು ಭಯದಿಂದ ಜೋರಾಗಿ ಅಳುತ್ತಿದ್ದರೂ ಬಿಡದ ಅರ್ಚಕರು ಕೆಂಡ ಹಾಯ್ದಿದ್ದಾರೆ. ಮಗುವೇನಾದರೂ ಅರ್ಚಕರ ಕೈ ಜಾರಿ ಕೆಂಡದ ಮೇಲೆ ಬಿದ್ದಿದ್ದರೆ ಏನಾಗುತ್ತಿತ್ತು? ಎಂದೆಲ್ಲ ಸಾಮಾಜಿಕ ಜಾಲತಾಣಿಗರು ವಿಡಿಯೋಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುರ್ಗಾದೇವಿಯ ಭಕ್ತರಿಗೆ ಮಕ್ಕಳಾಗದ ಕಾರಣ ತಮಗೆ ಮಗುವಾದರೆ ಮಗುವಿನಿಂದಲೇ ಕೆಂಡ ಹಾಯಿಸುವುದಾಗಿ ಹರಕೆ ಹೊತ್ತಿದ್ದರು.

ಆ ಹರಕೆ ತೀರಿಸಲು ಅರ್ಚಕರಾದ ಬಸವರಾಜ ಸ್ವಾಮಿ ಅವರ ಬಳಿ ಮನವಿ ಮಾಡಿಕೊಂಡರು. ಅವರ ಒತ್ತಾಯಕ್ಕೆ ಮಣಿದು ಅರ್ಚಕ ಮಗುವನ್ನು ಎತ್ತಿ ಹಿಡಿದು ಕೆಂಡ ಹಾಯ್ದಿದ್ದಾರೆ ಎನ್ನಲಾಗಿದೆ. ಇದುವರೆಗೂ ದೇವಸ್ಥಾನದ ಅರ್ಚಕರ ವಿರುದ್ಧವಾಗಲಿ ಅಥವಾ ಪೋಷಕರ ವಿರುದ್ಧವಾಗಲಿ ಯಾವ ಕೇಸೂ ದಾಖಲಾಗಿಲ್ಲ.

Comments are closed.