ಕರ್ನಾಟಕ

ರಾಜ್ಯದಲ್ಲಿ ನಿಲ್ಲದ ಮಳೆ ಆರ್ಭಟ; ಕರಾವಳಿಯಲ್ಲಿ ಹಳದಿ ಅಲರ್ಟ್​ ಘೋಷಣೆ

Pinterest LinkedIn Tumblr

ಬೆಂಗಳೂರು: ಕರ್ನಾಟಕದಲ್ಲಿ ಮಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಕಳೆದ ಎರಡು ವಾರಗಳಿಂದ ಹಲವೆಡೆ ಎಡೆಬಿಡದೆ ಸುರಿಯುತ್ತಿರುವ ಮಳೆ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ.

ಇಂದಿನಿಂದ 2 ದಿನ ಮತ್ತೆ ರಾಜ್ಯಾದ್ಯಂತ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗದಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಹಳದಿ ಅಲರ್ಟ್ ಘೋಷಿಸಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್. ಪಾಟೀಲ್ ಹೇಳಿದ್ದಾರೆ. ಇಂದು ಮತ್ತು ನಾಳೆ ಕರ್ನಾಟಕದ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಕೇರಳದ ಹಲವೆಡೆ ಮಳೆಯಾಗುತ್ತಿರುವುದರಿಂದ ಅದರ ಪರಿಣಾವಾಗಿ ಕರ್ನಾಟಕದ ಕರಾವಳಿಯಲ್ಲೂ ಮಳೆ ಹೆಚ್ಚಾಗಲಿದೆ.

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಕಡೆ ಅ. 26ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿ, ಈ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಇಂದು ಮಳೆಯಾಗುವ ನಿರೀಕ್ಷೆ ಇದೆ. ಅಕ್ಟೋಬರ್ 27, 28ರಂದು ಉತ್ತರ ಒಳನಾಡಿನಲ್ಲಿ ಒಣ ಹವೆ ಇರಲಿದೆ. ಹಾವೇರಿ ಗದಗ ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್ ಕೊಡಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ನಿರೀಕ್ಷೆಯಿದೆ.

ಅ. 26 ಮತ್ತು 27ರಂದು ರಾಜ್ಯದ ಬಹುತೇಕ ಎಲ್ಲ ಕಡೆ ಮಳೆಯಾಗುವ ನಿರೀಕ್ಷೆ ಇದ್ದು, ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರಿನ ಕೆಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಈಗ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ತಗ್ಗಿದ್ದು, ದಕ್ಷಿಣ ಒಳನಾಡಿನಲ್ಲಿ ಅ. 27ರವರೆಗೆ ಮಳೆ ಮುಂದುವರಿಯಲಿದೆ.

ಕೇರಳದ ಕರಾವಳಿ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಕರ್ನಾಟಕ ಕರಾವಳಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಅ. 27ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸೋಮವಾರದವರೆಗೂ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ.

Comments are closed.