ಕರಾವಳಿ

ರೌಡಿಶೀಟರ್, ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣ : ಪ್ರಮುಖ ಆರೋಪಿ ಸಹಿತಾ ಇಬ್ಬರ ಸೆರೆ

Pinterest LinkedIn Tumblr

ಬಂಟ್ವಾಳ, ಅಕ್ಟೋಬರ್ 25: ಇತ್ತೀಚಿಗೆ ಹತ್ಯೆಗೀಡಾದ ರೌಡಿಶೀಟರ್, ತುಳು ಚಿತ್ರನಟ ಸುರೇಂದ್ರ ಭಂಡಾರಿ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸುರೇಂದ್ರನ ಆಪ್ತ ಸ್ನೇಹಿತ ಬಂಟ್ವಾಳ ನಿವಾಸಿ ಸತೀಶ್ ಕುಲಾಲ್ ಮತ್ತು ಮುಲ್ಕಿ ಕಿನ್ನಿಗೋಳಿ ನಿವಾಸಿ ಗಿರೀಶ್ ಯಾನೆ ಗಿರಿ ಬಂಧಿತ ಆರೋಪಿಗಳು.

ಇಬ್ಬರು ಆರೋಪಿಗಳು ಅಕ್ಟೋಬರ್ ಶನಿವಾರ ರಾತ್ರಿ ಕಾಸರಗೋಡಿನಿಂದ ಬಾಡಿಗೆ ವಾಹನದಲ್ಲಿ ಬಂಟ್ವಾಳಕ್ಕೆ ಬರುತ್ತಿದ್ದ ಸಂದರ್ಭ ಅವರ ಚಲನೆಯ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ಡಿವೈಎಸ್‌‌‌ಪಿ ವೆಟೆಂಟೆನ್‌‌ ಡಿಸೋಜ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸುರೇಂದ್ರ ಭಂಡಾರಿ ಬಂಟ್ವಾಳ್ ಅವರನ್ನು ಅಕ್ಟೋಬರ್ 20ರಂದು ರಾತ್ರಿ ಪುರಸಭಾ ವ್ಯಾಪ್ತಿಯ ಭಂಡಾರಿಬೆಟ್ಟು ವಸತಿ ಸಂಕೀರ್ಣದಲ್ಲಿ ವಾಸವಿದ್ದ ಅವರ ಫ್ಲಾಟ್‌ಗೆ ಪ್ರವೇಶಿಸಿ ಹತ್ಯ್ರೆ ಮಾಡಲಾಗಿತ್ತು. ಘಟನೆ ಮರುದಿನ ಮಧ್ಯಾಹ್ನ ಬೆಳಕಿಗೆ ಬಂದಿತ್ತು. ಬಳಿಕ ಪೊಲೀಸರು ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಹಿಂದಿನ ರಾತ್ರಿ ಇಬ್ಬರು ವ್ಯಕ್ತಿಗಳು ಫ್ಲಾಟ್‌‌ಗೆ ಪ್ರವೇಶಿಸಿರುವುದು ಕಂಡುಬಂದಿದೆ.

ಇದೇ ವೇಳೆ ಆರೋಪಿ ಸತೀಶ್ ಕುಲಾಲ್ ಹೆಸರಿನಲ್ಲಿ ಕೊಲೆ ನಾನೇ ಮಾಡಿದ್ದು, ಇದು ಉಡುಪಿಯಲ್ಲಿ ನಡೆದ ಕಿಶನ್ ಹೆಗ್ಡೆ ಕೊಲೆಗೆ ಪ್ರತಿಕಾರ ಎಂದು ಹೇಳುತ್ತಿರುವ 2 ನಿಮಿಷ 17 ಸೆಕೆಂಡಿನ ಆಡಿಯೊ ಒಂದು ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿತ್ತು.

”ನಾನು 22 ವರ್ಷಗಳಿಂದ ಸುರೇಂದ್ರ ಜೊತೆ ಒಟ್ಟಿಗೆ ಇದ್ದು ಅವರ ಎಲ್ಲಾ ವ್ಯವಹಾರ ನನಗೆ ಗೊತ್ತಿತ್ತು. ಸುರೇಂದ್ರ ಬಡ್ಡಿ ವ್ಯವಹಾರ ನಡೆಸುತ್ತಿದ್ದ. ಆ ಪಾಪದ ಹಣವನ್ನು ಕಿಶನ್ ಹೆಗ್ಡೆ ಅವರಂತಹ ಒಳ್ಳೆಯ ವ್ಯಕ್ತಿಗಳ ಕೊಲೆಗೆ ದುರುಪಯೋಗ ಮಾಡುತ್ತಿದ್ದ. ಕಿಶನ್ ಹೆಗ್ಡೆ ಹತ್ಯೆಗೆ ಸುರೇಂದ್ರ ಹಣ ಸಹಾಯ ಮಾಡಿದ್ದ. ಈ ವಿಚಾರ ನನಗೆ ತಿಳಿದಿತ್ತು. ನಾನು ಸುರೇಂದ್ರಗೆ ಹೇಳಿದೆ. ನೀನು ತಪ್ಪು ಮಾಡುತ್ತಿದ್ದಿ, ನಿನಗೆ ಇದೆಲ್ಲಾ ಬೇಡ ಎಂದು. ಅದಕ್ಕೆ ನೀನು ಈ ವಿಚಾರ ಹೊರಗಡೆ ಹೇಳಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಅನಾಮಧೇಯ ವ್ಯಕ್ತಿಯೊಬ್ಬನಿಗೆ ಸುರೇಂದ್ರ ಕರೆ ಮಾಡಿ ಕಿಶನ್ ಹೆಗ್ಡೆ ಕೊಲೆ ನಡೆಸಿದ ತಂಡದ ನಾಯಕ ಮನೋಜ್ ಕೋಡಿಕೆರೆಯನ್ನು ಜೈಲಿನಲ್ಲಿ ಭೇಟಿ ಮಾಡಿ ಒಂದೂವರೆ ಲಕ್ಷ ರೂ. ಹಣ ಮತ್ತು ಬಟ್ಟೆ ನೀಡಿದ್ದೇನೆ. ಇದಕ್ಕೆ ನಿಮ್ಮ ಸಹಾಯ ಬೇಕು ಎಂದು ಹೇಳಿದ್ದ. ಈ ವೇಳೆ ನನಗೆ ಕೋಪ ಮತ್ತು ಬೇಸರ ವಾಗಿತ್ತು.

ಇನ್ನು ಹೀಗೆ ಮುಂದುವರಿದರೆ ಕೋಡಿಕೆರೆ ಮನೋಜ್ ಮತ್ತು ಸುರೇಂದ್ರ ಬಂಟ್ವಾಳ್ ಸೇರಿ ಇನ್ನೂ ಅನೇಕ ಅಮಾಯಕರ ಕೊಲೆ ನಡೆಸುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ಈ ಕೊಲೆ ಮಾಡಿದ್ದೇನೆ. ನಾವು ಈಗ ಕಾರವಾರದಲ್ಲಿ ಇದ್ದೇನೆ. ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಒಂದೆರಡು ದಿನಗಳಲ್ಲಿ ಪೊಲೀಸರಿಗೆ ಶರಣಾಗುತ್ತೇನೆ” ಎಂದು ಆತ ಆಡಿಯೊದಲ್ಲಿ ತಿಳಿಸಿದ್ದಾನೆ.

ಸುರೇಂದ್ರ ಬಂಟ್ವಾಳ್ ಅವರ ಆಪ್ತ ಸ್ನೇಹಿತ ಸತೀಶ್ ಕುಲಾಲ್ ಎಂಬಾತ ಈ ಆಡಿಯೋ ಸಂದೇಶ ರವಾನಿಸಿದ್ದು ಎಂದು ಹೇಳಲಾಗುತ್ತಿತ್ತು. ಆದರೆ ಇದು ಸತೀಶ್ ಕುಲಾಲ್ ಕಳಿಸದ ಅಡಿಯೋ ಅಥವಾ ಬೇರೆಯವರು ಸತೀಶ್ ಕುಲಾಲ್ ಹೆಸರಿನಲ್ಲಿ ಕಳಿಸದ ಅಡಿಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಕೊಲೆ ಆರೋಪಿಗಳಿಬ್ಬರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Comments are closed.