ಕರ್ನಾಟಕ

ಕೊರೋನಾ: ಶಾಲೆಗಳಿಗೆ ದಾಖಲಾಗದ ಸಾವಿರಾರು ವಿದ್ಯಾರ್ಥಿಗಳು!

Pinterest LinkedIn Tumblr


ಮೈಸೂರು: ಕೊರೋನಾ ಸೋಂಕು ಭೀತಿಯಿಂದಾಗಿ ಪೋಷಕರು ಮಕ್ಕಳನ್ನು ಶಾಲೆಗಳಿಗೆ ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಚಾಮರಾಜನಗರದ ಸರ್ಕಾರಿ ಶಾಲೆಗಳು ಮಕ್ಕಳ ದಾಖಲಾತಿಗಳಲ್ಲದೆ ಸೊರಗುತ್ತಿವೆ.

ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಪೋಷಕರು ಶಾಲೆಗಳಿಗೆ ಮಕ್ಕಳನ್ನು ಸೇರ್ಪಡೆಗೊಳಿಸಲು ನಿರಾಕರಿಸುತ್ತಿದ್ದಾರೆ. ಶಾಲೆಗಳಿಗೆ ಮಕ್ಕಳನ್ನು ಸೇರ್ಪಡೆಗೊಳಿಸಲು ಸರ್ಕಾರ ಸೆಪ್ಟೆಂಬರ್ 30ರವರೆಗೂ ಗಡುವು ನೀಡಿತ್ತು. ನಂತರ ಈ ಗಡುವನ್ನು ಅಕ್ಟೋಬರ್ 16ಕ್ಕೆ ವಿಸ್ತರಿಸಿತ್ತು. ಆದರೂ, ಪೋಷಕರು ಮಕ್ಕಳನ್ನು ದಾಖಲು ಮಾಡಲು ಮುಂದಾಗಿಲ್ಲ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸುಮಾರು 4,605 ವಿದ್ಯಾರ್ಥಿಗಳು ಇನ್ನೂ ದಾಖಲಾತಿ ಪಡೆದಿಲ್ಲ ಎಂದು ವರದಿಗಳು ತಿಳಿಸಿವೆ.

ಸರ್ಕಾರಿ ಶಾಲೆಗಳಲ್ಲಾಗುತ್ತಿರುವ ಈ ಬೆಳವಣಿಗೆಗಳು ಅಧಿಕಾರಿಗಳ ನಿದ್ದೆಗೆಡಿಸಿದೆ. ಇದೀಗ ಅಧಿಕಾರಿಗಳು ಪೋಷಕರ ಮನವೊಲಿಸಲು ಪ್ರಯತ್ನಗಳನ್ನು ನಡೆಸಲು ಮುಂದಾಗಿದ್ದಾರೆ.

ಪ್ರಸಕ್ತ ಸಾಲಿನಲ್ಲಿ 129 ಸರ್ಕಾರಿ ಶಾಲೆಗಳಲ್ಲಿನ ಬೆಳವಣಿಗೆಗಳನ್ನು ಗಮನಿಸಿದರೆ, ಅನುದಾನಿಕ ಶಾಲೆಗಳಲ್ಲಿ 1,164 ಮತ್ತು ಅನುದಾನರಹಿತ ಶಾಲೆಗಳಲ್ಲಿ 2,582 ರಷ್ಟು ದಾಖಲಾತಿಗಳು ಇಳಿಕೆಯಾಗಿರುವುದು ಕಂಡು ಬಂದಿದೆ.

2020-21ಸಾಲಿನಲ್ಲಿ ಚಾಮರಾಜನಗರದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 1,22,389 ಆಗಿದ್ದು ಈ ಸಂಖ್ಯೆ 2019-20ರಲ್ಲಿ 1,26,994 ರಷ್ಟಿತ್ತು ಎಂದು ತಿಳಿದುಬಂದಿದೆ.

ಒಂದು ವರ್ಷ ಹಾಳಾದರೂ ಸರಿ ಮಕ್ಕಳನ್ನು ಅಪಾಯಕ್ಕೆ ಸಿಲುಕಿಸುವುದಿಲ್ಲ. ಕಳೆದ ವರ್ಷದಂತೆಯೇ ಈ ವರ್ಷ ಕೂಡ ಸರ್ಕಾರ ಮಕ್ಕಳನ್ನು ಪರೀಕ್ಷೆಗಳಿಲ್ಲದೆಯೇ ಉತ್ತೀರ್ಣಗೊಳಿಸುವ ಸಾಧ್ಯತೆಗಳಿವೆ ಎಂದು ಕೆಲ ಪೋಷಕರು ಹೇಳುತ್ತಿದ್ದಾರೆ.

ನನ್ನ ಮಗಳು ಶಾಲೆಗೆ ಸೇರ್ಪಡೆಗೊಳ್ಳಬೇಕೆಂದು ಆಸೆ ಪಡುತ್ತಿದ್ದಾಳೆ. ಆದರೆ ಆರ್ಥಿಕ ಸಂಕಷ್ಟ ನನ್ನ ಕೈಗಳನ್ನು ಕಟ್ಟಿ ಹಾಕಿದೆ. ಹಣ ಸಿಗುತ್ತಿದ್ದಂತೆಯೇ ಶೀಘ್ರಗತಿಯಲ್ಲಿ ಮಗಳನ್ನು ಶಾಲೆಗೆ ಸೇರ್ಪಡೆಗೊಳಿಸುವೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸೋಮಣ್ಣ ಎಂಬುವವರು ಮಾತನಾಡಿ, ಮಕ್ಕಳನ್ನು ಶಾಲೆಗೆ ದಾಖಲು ಮಾಡಲು ನಮ್ಮ ಬಳಿ ಹಣವಿಲ್ಲವೆಂದು ಪೋಷಕರು ಹೇಳುತ್ತಿದ್ದಾರೆ. ಕಳೆದ 6-7 ತಿಂಗಳಿಂದ ಆದಾಯಗಳು ಅಷ್ಟಾಗಿ ಬಾರದ ಕಾರಣ ಸಾಕಷ್ಟು ಪೋಷಕರು ಇದೇ ರೀತಿ ಹೇಳುತ್ತಿದ್ದಾರೆಂದು ತಿಳಿಸಿದ್ದಾರೆ.

ಡಿಡಿಪಿಐ ಜವರೇಗೌಡ ಅವರು ಮಾತನಾಡಿ, ಈ ವರೆಗೂ 4,000 ವಿದ್ಯಾರ್ಥಿಗಳು ಇನ್ನೂ ಶಾಲೆಯಲ್ಲಿ ದಾಖಲಾತಿಗಳನ್ನು ಪಡೆದಿಲ್ಲ. ವಿದ್ಯಾರ್ಥಿಗಳು ದಾಖಲಾಗುವಂತೆ ಮಾಡಿ ಎಂದು ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ ಆದರೆ, ಸೂಚನೆಗಳ ನಡುವಲ್ಲೂ ಸಂಖ್ಯೆ ಸುಧಾರಣೆಗೊಂಡಿಲ್ಲ. ಹಣ ಪಾವತಿ ಮಾಡುವುದು ಕಷ್ಟವಾದರೆ ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುವಂತೆ ಮನವಿ ಮಾಡುತ್ತಿದ್ದೇವೆ. ಆದರೂ, ಪೋಷಕರು ಮನಸ್ಸು ಮಾಡುತ್ತಿಲ್ಲ. ಈಗಾಗಲೇ 700 ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಸೇರ್ಪಡೆಗೊಂಡಿದ್ದಾರೆ. ಇದಕ್ಕೆ ಬಿಇಒ ಕೂಡ ಅನುಮತಿ ನೀಡಿದ್ದಾರೆಂದು ತಿಳಿಸಿದ್ದಾರೆ.

Comments are closed.