ಕರ್ನಾಟಕ

ಬೆಂಗಳೂರಿನಲ್ಲಿ ಮಳೆಯ ಆರ್ಭಟಕ್ಕೆ ಜನಜೀವನ ತತ್ತರ; 350ಕ್ಕೂ ಹೆಚ್ಚಿನ ಮನೆಗಳಿಗೆ ನುಗ್ಗಿದ ನೀರು

Pinterest LinkedIn Tumblr

ಬೆಂಗಳೂರು: ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರು ನಗರ ತತ್ತರಗೊಂಡಿದೆ. ರಾತ್ರಿವರೆಗೂ ಸುರಿದ ಭಾರೀ ಮಳೆಯಿಂದಾಗಿ ನಗರದ ಹೊಸಕೆರೆ ಹಳ್ಳಿ ಸಂಪೂರ್ಣವಾಗಿ ಮುಳುಗಡೆಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಎಲ್ಲಿ ನೋಡಿದರೂ ಮಳೆಯ ನೀರು, ಅಲ್ಲಲ್ಲಿ ತೇಲಿಬಂದ ಕಾರು, ಬೈಕುಗಳು, ಮನೆಯೊಳಗೆ ನುಗ್ಗಿದ ಕೆಂಪು ನೀರು, ಮಳೆಗೆ ಕುಸಿದ ಗೋಡೆಗಳು, ಮುರಿದು ಬಿದ್ದ ಮರಗಳು, ರಾಜಕಾಲುವೆ ಯಾವುದು, ರಸ್ತೆ ಯಾವುದು ಎಂಬು ತಿಳಿಯದಂತಹ ಸ್ಥಿತಿ ನಿರ್ಮಾಣವಾಗಿದೆ.

ಹೊಸಕೆರೆಹಳ್ಳಿಯಲ್ಲಿ ವೃಷಭಾವತಿ ಕಾಲುವೆಗೆ ಸಂಪರ್ಕಿಸುವ ಬೃಹತ್ ರಾಜಕಾಲುವೆಯ ಕಾಮಗಾರಿಗಾಗಿ ನೀರಿನ ದಿಕ್ಕನ್ನು ಬದಲಿಸಲಾಗಿದ್ದು, ಇಡೀ ಅವಘಡಕ್ಕೆ ಇದೇ ಕಾರಣವೆಂದು ಹೇಳಲಾಗುತ್ತಿದೆ. ನೀರಿನ ದಿಕ್ಕನ್ನು ಬದಲಿಸಿದ ಪರಿಣಾಮ ಭಾರೀ ಪ್ರಮಾಣದ ನೀರು ಒಮ್ಮೆಲೆ ನುಗ್ಗಿ ಬಂದಿದೆ. ಪರಿಣಾಮ ರಾಜಕಾಲುವೆ ಸಮೀಪದ ಮನೆಗಳು, ಕಟ್ಟಡಗಳು ಜಲಾವೃತಗೊಂಡವು. ಈ ಭಾಗದಲ್ಲಿ ಅಂದಾಜು 350ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಹ ಪರಿಸ್ಥಿತಿಎದುರಾಗಿತ್ತು.

ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು ಹಿಂಭಾಗದ ರಾಜಕಾಲುವೆ ಪಕ್ಕದ ರಸ್ತೆಯಲ್ಲೇ ನದಿಯಂತೆ ರಭಸವಾಗಿ ನೀರು ಹರಿದ ಪರಿಣಾಮ ಮಾರುತಿ ಸ್ವಿಫ್ಟ್ ಕಾರೊಂದು ಕೊಚ್ಚಿಕೊಂಡು ಹೋಯಿತು. ದತ್ತಾತ್ರೇಯನಗರ ಒಂದರಲ್ಲೇ 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ಇಲ್ಲಿನ ಬಡಾವಣೆಗಳ ಮನೆ, ಅಪಾರ್ಟ್’ಮೆಂಟ್ ಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು. ಹೊಸಕೆರೆಹಳ್ಳಿಯಲ್ಲಿ ಜನರು ಕಟ್ಟಡಗಳ ಮೇಲೆ ಆಶ್ರಯ ಪಡೆದಿದ್ದರು. ನೆಲಮಹಡಿಯಲ್ಲಿ ಸಿಲುಕಿದ್ದವರನ್ನು ಅಗ್ನಿಶಾಮಕ ತಂಡ ಹಾಗೂ ಎಸ್’ಡಿಆರ್ಎಫ್ ಸಿಬ್ಬಂದಿ ಬೋಟ್ ಮೂಲಕ ರಕ್ಷಣೆ ಮಾಡಿದರು, ಹೊಸಕೆರೆಹಳ್ಳಿ ದತ್ತಾತ್ರೇಯ ದೇವಾಲಯವೂ ಮುಳುಗಿದೆ.

ಅ.21 ರಂದು ಸುರಿದ ಮಳೆಯಿಂದಾಗಿ ಹೊಸಕೆರೆಹಳ್ಳಿ ಗುರುದತ್ತ ಲೇಔಟ್ನಲ್ಲಿ ರಾಜಕಾಲುವೆ ಕುಸಿದು ಅವಾಂತರ ಸೃಷ್ಟಿಯಾಗಿತ್ತು.

ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಕೋರಮಂಗಲ 4ನೇ ಬ್ಲಾಕ್, ಸಿಟಿ ಬೆಡ್ ಬಾಸ್ಕರ್ ರಾವ್ ಪಾರ್ಕ್ ಹಾಗೂ ಶ್ರೀಕಂಠೇಶ್ವರ ಪಾರ್ಕ್ ಸುತ್ತಮುತ್ತಲ ರಸ್ತೆಗಳು ಹಾಗೂ ಮನೆಗಳು ಜಲಾವೃತವಾಗಿ ಸವಾರರು ಹಾಗೂ ನಿವಾಸಿಗಳು ಪರದಾಡಿದರು.

ಬನಶಂಕರಿ 2ನೇ ಹಂತ, ಎಲ್ಐಸಿ ಕಾಲೋನಿ 1ನೇ ಕ್ರಾಸ್, ಐಐಟಿ ಬಡಾವಣೆ, ಕೋರಮಂಗಲ 4 ನೇ ಬ್ಲಾಕ್, ಜೆಪಿ ನಗರ 6 ನೇ ಹಂತ, ಅರೆಕೆಂಪನಹಳ್ಳಿ ವಾರ್ಡ್, ಹೊಸಕೆರಹಳ್ಳಿ, ದತ್ತಾತ್ರೇಯಲೇಔಟ್, ಕತ್ರಿಗುಪ್ಪೆ ವಿಠಲನಗರ, ವಸಂತಪುರ,ಆರ್ಆರ್ ನಗರ, ಜೆಸಿ ನಗರ, ಕೆ.ಆರ್ ಮಾರುಕಟ್ಟೆ, ಜೆ.ಸಿ.ರಸ್ತೆ, ಕಾಳಿದಾಸ ವೃತ್ತ, ಬೊಮ್ಮನಹಳ್ಳಿಯ ಸಾಕಷ್ಟು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.

Comments are closed.