ಕರ್ನಾಟಕ

ಸಿಎಂ ಸೂಚನೆಯಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು; ನೀರು ನುಗ್ಗಿದ ಪ್ರದೇಶಗಳಿಗೆ ಅಧಿಕಾರಿಗಳ ಭೇಟಿ

Pinterest LinkedIn Tumblr

ಬೆಂಗಳೂರು: ಶುಕ್ರವಾರ ಸಂಜೆಯಿಂದ ಸುರಿದ ಮಳೆಯಿಂದ ಬೆಂಗಳೂರಿನ ಜನ ಜೀವನವೇ ಅಸ್ತವ್ಯಸ್ತಗೊಂಡಿದ್ದು, ಜನ ಪರದಾಟ ನಡೆಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಬಿಬಿಎಂಪಿ ಕಮಿಷನರ್, ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ ಕಾರಣ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದರು. ಬಳಿಕ, ಹೊಸಕೆರೆಹಳ್ಳಿ ಮಾಜಿ ಕಾರ್ಪೋರೇಟರ್ ಸ್ಥಳಕ್ಕೆ ಆಗಮಿಸಿ, ಸಾಂತ್ವನ ಹೇಳಿದ್ದರು. ಮಳೆಯಿಂದ ನೂರಾರು ಮನೆಗಳಿಗೆ ನೀರು ನುಗ್ಗಿದ್ದರೂ ಬಿಬಿಎಂಪಿ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಅವರಿಗೆ ಫೋನ್ ಮಾಡಿ, ಮಳೆಪೀಡಿತ ಸ್ಥಳಗಳಿಗೆ ಭೇಟಿ ನೀಡುವಂತೆ ಸೂಚಿಸಿದ್ದರು.

ಯಡಿಯೂರಪ್ಪ ಸೂಚನೆಯ ಬಳಿಕ ಮಂಜುನಾಥ್ ಪ್ರಸಾದ್ ಮಳೆ ಪೀಡಿತ ಪ್ರದೇಶಗಳತ್ತ ತೆರಳಿದ್ದಾರೆ. ಸಚಿವ ಆರ್​. ಅಶೋಕ್ ಮತ್ತು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೊಸಕೆರೆಹಳ್ಳಿ, ದತ್ತಾತ್ರೇಯ ವಾರ್ಡ್​ನಲ್ಲಿ ಮಳೆಯಿಂದ ಹಾನಿಗಳಿಗೊಳಗಾದ ಸ್ಥಳಗಳ ಪರಿಶೀಲನೆಗೆ ಬರುವ ವಿಷಯ ತಿಳಿದ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು ಕೂಡ ಇದೀಗ ದೌಡಾಯಿಸುತ್ತಿದ್ದಾರೆ.

ಇಂದು ಬೆಳಗ್ಗೆ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್​ಗೆ ಕರೆ ಮಾಡಿದ್ದ ಸಿಎಂ ಯಡಿಯೂರಪ್ಪ, ಮಳೆ ಹೆಚ್ಚಾಗಿ ಸುರಿದ ಪ್ರದೇಶಗಳಿಗೆ ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸುವಂತೆ ಸೂಚನೆ ನೀಡಿದ್ದರು. ಅಲ್ಲದೆ, ಇಂದು ಮತ್ತು ನಾಳೆ ಸಹ ಬಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ, ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕೊನೆಗೂ ಮಳೆಪೀಡಿತ ಪ್ರದೇಶಗಳತ್ತ ಬಿಬಿಎಂಪಿ ಆಯುಕ್ತರು ತೆರಳಿದ್ದಾರೆ.

ಸಚಿವ ಆರ್​. ಅಶೋಕ್ ಕ್ಷೇತ್ರದ ವ್ಯಾಪ್ತಿಗೆ ಬರುವ ಹೊಸಕೆರೆಹಳ್ಳಿ, ದತ್ತಾತ್ರೇಯ ನಗರದಲ್ಲಿ ಹೆಚ್ಚು ಹಾನಿ ಆಗಿರು ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡಬೇಕೆಂದು ಆರ್​.ಅಶೋಕ್ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಒತ್ತಾಯಿಸಿದ್ದಾರೆ. ಅವರ ಒತ್ತಾಯಕ್ಕೆ ಮಣಿದಿರುವ ಸಿಎಂ ಯಡಿಯೂರಪ್ಪ ಪರಿಹಾರ ಘೋಷಣೆಗೆ ಒಪ್ಪಿದ್ದಾರೆ. ಇಂದು ಸಂಜೆಯೊಳಗೆ ಪರಿಹಾರ ಮೊತ್ತ ಘೋಷಣೆಯಾಗುವ ಸಾಧ್ಯತೆಯಿದೆ.

ಕಾರ್ಪೋರೇಟರ್ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಆದರೆ, ಅಧಿಕಾರಿಗಳು ಯಾರೂ ಸ್ಥಳಕ್ಕೆ ಆಗಮಿಸಿರಲಿಲ್ಲ. ಮಳೆಯಿಂದ ಹಾನಿಯಾಗಿ 18 ಗಂಟೆ ಕಳೆದಿದ್ದರೂ ಯಾರೊಬ್ಬರೂ ಸಂತ್ರಸ್ತರಿರುವ ಸ್ಥಳಕ್ಕೆ ಆಗಮಿಸಿರಲಿಲ್ಲ. 250ಕ್ಕೂ ಹೆಚ್ಚು ಮನೆಗಳ ಜನರು ನಿರಾಶ್ರಿತರಾಗಿದ್ದರೂ ಬಿಬಿಎಂಪಿ ಅಧಿಕಾರಿಗಳು ಅತ್ತ ತಲೆ ಹಾಕದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸಿಎಂ ಸೂಚನೆ ಬಳಿಕ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ಈಗ ಹೊಸಕೆರೆಹಳ್ಳಿಯತ್ತ ಮುಖ ಮಾಡುತ್ತಿದ್ದಾರೆ.

Comments are closed.