ಕರ್ನಾಟಕ

ಮುಖ್ಯಮಂತ್ರಿ ಬದಲಾವಣೆ ಇಲ್ಲ!: ಅಧಿಕೃತ ಟ್ವೀಟ್ ಮಾಡಿದ ಬಿಜೆಪಿ ಸ್ಪಷ್ಟನೆ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ ಎಂದು ಬಿಜೆಪಿ ಪಕ್ಷ ಅಧಿಕೃತ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಹೆಚ್ಚು ದಿನ ಇರುವುದಿಲ್ಲ ಎಂದು ಹೇಳಿಕೆ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಬಿಎಸ್‌ವೈ ಹಾಗೂ ಬಿಜೆಪಿ ಪಕ್ಷಕ್ಕೆ ಇದು ತೀವ್ರ ಮುಜುಗರ ಉಂಟುಮಾಡಿತ್ತು.

ಯತ್ನಾಳ್ ಹೇಳಿಕೆ ಬೆನ್ನಲ್ಲೇ ಬಿಎಸ್‌ವೈ ಆಪ್ತರು ತಿರುಗಿ ಬಿದ್ದಿದ್ದರು. ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಕೃಷಿ ಸಚಿವ ಬಿ.ಸಿ ಪಾಟೀಲ್ ಸೇರಿದಂತೆ ಹಲವರು ಆಗ್ರಹ ಮಾಡಿದ್ದರು.

ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಕೂಡಾ ಸ್ಪಷ್ಟನೆ ನೀಡಿ ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೀಗಿದ್ದರೂ ವಿರೋಧ ಪಕ್ಷಗಳ ಪಾಲಿಗೆ ಯತ್ನಾಳ್ ಹೇಳಿಕೆ ರಾಜಕೀಯ ಅಸ್ತ್ರವಾಗಿ ದೊರಕಿತ್ತು.

ಯತ್ನಾಳ್ ಹೇಳಿಕೆ ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಅಧಿಕೃತ ಟ್ವಿಟ್ಟರ್‌ ನಲ್ಲಿ ಟ್ವೀಟ್‌ ಮಾಡುವ ಮೂಲಕ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದಿದೆ. ಇನ್ನು ಬರುವ ಮೂರು ವರ್ಷಗಳ ಕಾಲ ಬಿಎಸ್‌ವೈ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದಿದೆ.

ಅಷ್ಟೇ ಅಲ್ಲ, ಯತ್ನಾಳ್ ಹೆಸರನ್ನು ಉಲ್ಲೇಖ ಮಾಡದೆ ಅಶಿಸ್ತು ಪ್ರದರ್ಶನ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

ಸೋಮವಾರ ರಾತ್ರಿ ವಿಜಯಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಬಿಎಸ್‌ ಯಡಿಯೂರಪ್ಪಹೆಚ್ಚು ದಿನ ಸಿಎಂ ಆಗಿ ಉಳಿಯುವುದಿಲ್ಲ ಎಂದಿದ್ದರು. ಅಲ್ಲದೆ ಹೈಕಮಾಂಡ್‌ ಕೂಡಾ ಬಿಎಸ್‌ವೈ ಬಗ್ಗೆ ಮುನಿಸಿಕೊಂಡಿದ್ದಾರೆ ಎಂದಿದ್ದರು.

Comments are closed.