ಕರ್ನಾಟಕ

ಜಾತಿ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಜಯಿಸಲು ಸಾಧ್ಯವಿಲ್ಲ: ಡಿಕೆಶಿಗೆ ದೇವೇಗೌಡ

Pinterest LinkedIn Tumblr


ಬೆಂಗಳೂರು: ಜಾತಿ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಜಯಿಸಲು ಸಾಧ್ಯವಿಲ್ಲವೆಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಟಾಂಗ್‌ ಕೊಟ್ಟಿದ್ದಾರೆ.

ಜೆಡಿಎಸ್‌ ಕಚೇರಿ ಜೆಪಿಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಯಾರು ಎಷ್ಟೇ ಪ್ರಭಾವಿಯಾಗಿದ್ದರೂ ಒಂದು ಜಾತಿಯಿಂದ ಗೆಲ್ಲಲು ಆಗುವುದಿಲ್ಲ. ಇದನ್ನು ನಾನು ಸಾವಿರ ಬಾರಿ ಹೇಳಿದ್ದೇನೆ,” ಎಂದರು.

”ನಮ್ಮ ಪಕ್ಷವನ್ನು ಒಡೆಯುವುದಾಗಿ ಯಾರಾದರೂ ಅಂದುಕೊಂಡಿದ್ದರೆ ಅದು ಭ್ರಮೆಯಷ್ಟೇ. ಯಾರು ಏನೇ ಹೇಳಲಿ. ನಮ್ಮ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ನಾನು ಕಾಂಗ್ರೆಸ್‌, ಬಿಜೆಪಿ ವಿರುದ್ಧ ಹೋರಾಡಿಕೊಂಡೇ ಬಂದಿದ್ದೇನೆ. ದೇಶದಲ್ಲಿ ಮುಸ್ಲಿಂ ಹಾಗೂ ಮಹಿಳೆಯರಿಗೆ ಮೀಸಲು ಕಲ್ಪಿಸಿರುವುದು ನಮ್ಮ ಪಕ್ಷ ಎಂದು ಹೇಳಿದರು.

ನನ್ನ ಹೆಸರಿನ ಮುಂದೆ ಗೌಡ ಎಂದಿದೆ. ಅದಕ್ಕಾಗಿ ನಿಂದನೆ ಮಾಡುವುದು ಸರಿಯಾ? ಅವರು ಚುನಾವಣೆ ಗೆಲ್ಲಲು ಏನು ಪ್ರಯೋಗ ಮಾಡುತ್ತಾರೋ ಮಾಡಿಕೊಳ್ಳಲಿ. ಅದಕ್ಕೆ ಅವರು ಸ್ವತಂತ್ರರು ಎಂದು ಮಾಜಿ ಪ್ರಧಾನಿ ತಿಳಿಸಿದರು.

”ನಮ್ಮದು ಕುಟುಂಬದ ಪಕ್ಷವಲ್ಲ. ಅಂಥ ಆರೋಪಕ್ಕೆ ಅರ್ಥವೂ ಇಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮುಂದುವರಿಸುತ್ತೇನೆ. ಬಡವರು, ರೈತರು, ಮಹಿಳೆಯರ ಪರವಾಗಿ ಇರುವ ಪಕ್ಷ ನಮ್ಮದಾಗಿದೆ. ಈಗಿನ ಸರಕಾರ ರೈತರ ವಿರುದ್ಧವಿದೆ,” ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು. ”ಆಯಾ ರಾಮ್‌ ಗಯಾ ರಾಮ್‌ಗಳಿಗೆ ನಾವು ಟಿಕೆಟ್‌ ಕೊಡುವುದಿಲ್ಲ. ಆರ್‌ಆರ್‌ನಗರದಲ್ಲಿ ನಮ್ಮ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆ,” ಎಂದು ತಿಳಿಸಿದರು.

Comments are closed.