ಬೆಂಗಳೂರು: ಕಳೆದ ವರ್ಷ ತೆರಕಂಡಿದ್ದ ಹಾರರ್ ಥ್ರಿಲ್ಲರ್ ‘ದಮಯಂತಿ’ ಚಿತ್ರದಲ್ಲಿ ರಾಧಿಕಾ ಮುಖ್ಯಭೂಮಿಕೆ ನಿಭಾಯಿಸಿದ್ದರು. ಅವರು ಎರಡು ಶೇಡ್‌ನಲ್ಲಿ ನಿಭಾಯಿಸಿದ್ದ ಪಾತ್ರ ಎಲ್ಲರ ಗಮನಸೆಳೆದಿತ್ತು. ಕನ್ನಡದಲ್ಲಿ ಮಾತ್ರವಲ್ಲದೆ, ಬಹುಭಾಷೆಯಲ್ಲಿ ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದವರು ನವರಸನ್. ಆದರೆ, ಸಿನಿಮಾ ಬಹಳಷ್ಟು ಸಮಯ ಚಿತ್ರಮಂದಿರದಲ್ಲಿ ಇರಲಿಲ್ಲ. ಸದ್ಯ ಕೊರೊನಾ ಕಾರಣದಿಂದಾಗಿ ಏಳು ತಿಂಗಳು ಬಂದ್ ಆಗಿದ್ದ ಚಿತ್ರಮಂದಿರಗಳು ಇದೇ ಅ.15ರಿಂದ ತೆರೆದುಕೊಳ್ಳಲಿವೆ. ಆ ಸಲುವಾಗಿ ‘ದಮಯಂತಿ’ ಕೂಡ ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕಲಿದೆ!
ಚಿತ್ರಮಂದಿರ ಓಪನ್ ಆದಕೂಡಲೇ ಜನರು ಯಾವ ರೀತಿ ಸ್ಪಂದಿಸಲಿದ್ದಾರೆ? ಮೊದಲಿನಂತೆಯೇ, ಚಿತ್ರಮಂದಿರಗಳಿಗೆ ಬರುತ್ತಾರೆಯೇ ಎಂಬುದು ಇನ್ನೂ ತಿಳಿದಿಲ್ಲ. ಹಾಗಾಗಿ, ಈಗಾಗಲೇ ತೆರೆಕಂಡ ಹಳೇ ಸಿನಿಮಾಗಳನ್ನು ಮತ್ತೆ ರಿಲೀಸ್ ಮಾಡುವುದಕ್ಕೆ ನಿರ್ಮಾಪಕರು ಮನಸ್ಸು ಮಾಡಿದ್ದಾರೆ. ಹೊಸ ಹೊಸ ಸಿನಿಮಾಗಳು ರೆಡಿ ಇದ್ದರೂ, ಈ ಹಿಂದೆ ತೆರೆಕಂಡಿದ್ದ ‘ಲವ್ ಮಾಕ್‌ಟೇಲ್’, ‘ದಿಯಾ’, ‘ಜಂಟಲ್‌ಮನ್’ ಚಿತ್ರಗಳನ್ನೇ ಮರುಬಿಡುಗಡೆ ಮಾಡಲಾಗುತ್ತಿದೆ. ಆ ಸಾಲಿಗೆ ಈಗ ರಾಧಿಕಾ ಕುಮಾರಸ್ವಾಮಿ ಅವರ ‘ದಮಯಂತಿ’ ಕೂಡ ಸೇರ್ಪಡೆಗೊಂಡಿದೆ.
‘ದಮಯಂತಿ’ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಜೊತೆಗೆ ಸೌರವ್ ಲೋಕಿ, ಜಿ.ಕೆ. ರೆಡ್ಡಿ, ಸಾಧು ಕೋಕಿಲ, ತಬಲಾ ನಾಣಿ, ಬಾಲ ರಾಜ್‌ವಾಡಿ, ಅಂಜನಾ, ರಾಜ್ ಬಹದ್ದೂರ್, ನವೀನ್ ಕೃಷ್ಣ, ರವಿ ಗೌಡ, ಹೊನ್ನವಳ್ಳಿ ಕೃಷ್ಣ, ಮಿತ್ರ, ಅನುಷಾ ರೈ ಮುಂತಾದವರು ನಟಿಸಿದ್ದರು. ಈ ಸಿನಿಮಾದ ಆಡಿಯೋವನ್ನು ನಟ ದರ್ಶನ್ ಅವರು ಲಾಂಚ್ ಮಾಡಿದ್ದರು. ಸದ್ಯ ರವಿಚಂದ್ರನ್ ಜೊತೆ ‘ರಾಜೇಂದ್ರ ಪೊನ್ನಪ್ಪ’ ಹಾಗೂ ಅರ್ಜುನ್ ಸರ್ಜಾ ಜೊತೆ ‘ಕಾಂಟ್ರಾಕ್ಟ್’ ಸಿನಿಮಾಗಳನ್ನು ಮಾಡುತ್ತಿದ್ದಾರೆ ರಾಧಿಕಾ.