ಕರ್ನಾಟಕ

2 ತಿಂಗಳ ಮಗುವಿಗೆ ಹೃದಯ ಶಸ್ತ್ರ ಚಿಕಿತ್ಸೆ; ಶಿವಮೊಗ್ಗದಿಂದ ಮಂಗಳೂರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ

Pinterest LinkedIn Tumblr


ಚಿಕ್ಕಮಗಳೂರು: 2 ತಿಂಗಳ ಮಗುವಿಗೆ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿದ್ದ ಆ್ಯಂಬುಲೆನ್ಸ್​​​ಗೆ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಟ್ಟ ಘಟನೆ ಭಾರೀ ಶ್ಲಾಘನೆಗೆ ಒಳಗಾಗಿದೆ.

ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಮೂಲದ ಎರಡು ತಿಂಗಳ ಮಗುವಿಗೆ ತುರ್ತಾಗಿ ಹೃದಯ ಸಂಬಂಧಿ ಚಿಕಿತ್ಸೆ ನೀಡಬೇಕಿತ್ತು. ಆದರೆ, ಬಡಕುಟುಂಬದ ಮಗುವಿನ ಪೋಷಕರು ಆಸ್ಪತ್ರೆಯಲ್ಲಿನ ಆ್ಯಂಬುಲೆನ್ಸ್ ಹಣ ಹೆಚ್ಚಾಗಿದ್ದರಿಂದ ಟ್ರಸ್ಟ್ ಮೂಲಕ ಚಿಕ್ಕಮಗಳೂರಿನ ಆ್ಯಂಬುಲೆನ್ಸ್​​​ಗೆ ಸಂಪರ್ಕಿಸಿದ್ದರು. ಕೂಡಲೇ ಶಿವಮೊಗ್ಗಕ್ಕೆ ಹೋಗಿ ಮಗುವನ್ನು ಕರೆದುಕೊಂಡು ಹೊರಟ ಆ್ಯಂಬುಲೆನ್ಸ್ ಚಾಲಕ ಆಗುಂಬೆ ಘಾಟ್ ಮೇಲೆ ಹೋಗಲು ರಸ್ತೆ ಜಾಮ್ ಆಗಿದ್ದ ಕಾರಣ ಚಿಕ್ಕಮಗಳೂರು ಮೂಲಕ ಮಂಗಳೂರಿಗೆ ಹೊರಟಿದ್ದಾರೆ.

ಈ ವೇಳೆ, ಆ್ಯಂಬುಲೆನ್ಸ್ ಚಾಲಕ ಚಿಕ್ಕಮಗಳೂರು ಪೊಲೀಸರಿಗೆ ಮನವಿ ಮಾಡಿದ್ದರಿಂದ ಕಾಫಿನಾಡಿನ ಪೊಲೀಸರು ಚಿಕ್ಕಮಗಳೂರಿನಿಂದ ಕೊಟ್ಟಿಗೆ ಹಾರದ ಗಡಿ ದಾಟುವವರೆಗೂ ಆ್ಯಂಬುಲೆನ್ಸ್​​​ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದಾರೆ. ರಸ್ತೆಯುದ್ಧಕ್ಕೂ ಕಾಫಿನಾಡಿನ ಜನರೂ ಕೂಡ ಆ್ಯಂಬುಲೆನ್ಸ್​​ಗೆ ದಾರಿ ಮಾಡಿಕೊಟ್ಟಿದ್ದಾರೆ. ಪೊಲೀಸರ ಈ ನಡೆಗೆ ಜಿಲ್ಲೆಯ ಜನ ಕೂಡ ಶ್ಲಾಘಿಸಿದ್ದಾರೆ.

ಶಿವಮೊಗ್ಗದಿಂದ ಸುಮಾರು ಎಂಟರಿಂದ ಒಂಬತ್ತು ಗಂಟೆಯ ಜರ್ನಿಯ ಮಂಗಳೂರಿಗೆ ಆ್ಯಂಬುಲೆನ್ಸ್ ಚಾಲಕ ಕೇವಲ ಮೂರೇ ಗಂಟೆಯಲ್ಲಿ ತಲುಪಿದ್ದಾನೆ. ಹೀಗಾಗಿ ಸಾರ್ವಜನಿಕರು ಆ್ಯಂಬುಲೆನ್ಸ್ ಚಾಲಕನ ಚಾಕಚಕ್ಯತೆಯ ಡ್ರೈವಿಂಗಿಗೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಾಕೆಂದ್ರೆ, ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗುವವರೆಗೂ ಅತಿಯಾದ ಅಪಾಯಕಾರಿ ತಿರುವುಗಳಿವೆ. ಚಾರ್ಮಾಡಿ ಘಾಟ್ ಡ್ರೈವಿಂಗ್ ನಿಜಕ್ಕೂ ಸವಾಲೇ ಸರಿ. ಹೀಗಿರುವಾಗ ಅದೇ ವೇಗವನ್ನು ಕಾಪಾಡಿಕೊಂಡು ಮೂರೇ ಗಂಟೆಗೆ ಶಿವಮೊಗ್ಗದಿಂದ ಮಂಗಳೂರಿಗೆ ತಲುಪಿರುವ ಡ್ರೈವರ್ ಜೀಶಾನ್ ಚಾಲನೆಗೂ ಜನ ಭೇಷ್ ಅಂದಿದ್ದಾರೆ.

Comments are closed.