ಕರ್ನಾಟಕ

ಸಿದ್ದರಾಮಯ್ಯ ಚಿಲ್ಲರೆ ರಾಜಕಾರಣ ಬಿಡಬೇಕು: ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ!

Pinterest LinkedIn Tumblr

ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಳ್ಳಲಿದೆ ಎಂಬ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಮೊದಲು ಚಿಲ್ಲರೆ ರಾಜಕಾರಣ ಮಾಡುವುದದನ್ನು ಬಿಡಬೇಕು ಎಂದು ಠೀಕಿಸಿದರು.

ಜೆಡಿಎಸ್ ಪಕ್ಷವೇ ಅಲ್ಲ, ಕುಮಾರಸ್ವಾಮಿ ಅವರದ್ದಿ ಅಳುಬುರಕ ರಾಜಕಾರಣ ಎಂದು ಟೀಕಿಸಿರುವ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿರುವ ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯರಿಂದಲೇ ಕಾಂಗ್ರೆಸ್‌ನ ಸರ್ವನಾಶ ಎಂದು ಕುಟುಕಿದ್ದಾರೆ.

ಕಳೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಮ್ ಎಂದು ಹೇಳಿದ್ದರಿಂದ ಮುಸ್ಲಿಂ ಮತಗಳು ವಿಭಜನೆಯಾಗಿದ್ದವು. ಸಿದ್ದರಾಮಯ್ಯ ಇತಿಹಾಸ ಅವಲೋಕಿಸಿದರೆ ಅವರ ಸಂಸ್ಕೃತಿ ಏನೆಂದು ಗೊತ್ತಾಗಲಿದೆ. ಯಾವ ಪಕ್ಷದಿಂದ ಬೆಳೆದು ಬಂದರೋ ಈಗ ಅದೇ ಪಕ್ಷದ ಸರ್ವನಾಶದ ಬಗ್ಗೆ ಮಾತಾನಾಡುತ್ತಿದ್ದಾರೆ.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲಿನ ಸಿಬಿಐ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಯಾವುದೇ ಜನಪ್ರತಿನಿಧಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಹೆದರುವ ಅವಶ್ಯಕತೆ ಇಲ್ಲ. ನಾವು ಸರಿಯಾಗಿ ಕೆಲಸ ಮಾಡಿದ್ದೇ ಆದರೆ ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ಧ ಇರಬೇಕು. ದೇಶದ ಕಾನೂನು ವ್ಯವಸ್ಥೆಯಲ್ಲಿ ಸತ್ಯಕ್ಕೆ ಜಯ ದೊರಕಲಿದೆ. ಹೀಗಾಗಿ ಸತ್ಯ ಇನ್ನೂ ಹೊರಗೆ ಬರಲಿದೆ ಎಂದು ಮಾರ್ಮಿಕವಾಗಿ ನುಡಿದರು.

 

Comments are closed.