ಕರ್ನಾಟಕ

ಕರ್ನಾಟಕ ಬಂದ್: ರಾಜ್ಯಾದ್ಯಂತ ತೀವ್ರಗೊಂಡ ರೈತರ ಪ್ರತಿಭಟನೆ; ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವರ ಬಂಧನ

Pinterest LinkedIn Tumblr

ಬೆಂಗಳೂರು: ರಾಜ್ಯ ಸರಕಾರದ ಭೂಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ, ದಲಿತ ಹಾಗೂ ಕಾರ್ಮಿಕ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್ ಪ್ರತಿಭಟನೆಯ ಕಾವು ಹೆಚ್ಚಾಗತೊಡಗಿದೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅನೇಕ ಕಡೆ ಇವತ್ತಿನ ಕರ್ನಾಟಕ ಬಂದ್​ನ ಬಿಸಿ ತಟ್ಟಿದೆ. ರಾಜ್ಯಾದ್ಯಂತ ಬಂದ್ ನಡೆಯುತ್ತಿದ್ದು ಬೆಂಗಳೂರು ನಗರ ಸೇರಿದಂತೆ ಹಲವು ಕಡೆಗಳಲ್ಲಿ ಭಾರೀ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿವೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅನೇಕ ಕಡೆ ರೈತರ ಪ್ರತಿಭಟನೆಗಳು ಕೆಲ ತೀವ್ರ ಸ್ವರೂಪ ಪಡೆದಿವೆ. ಪರಿಸ್ಥಿತಿ ಕೈ ಮೀರಿ ಹೋಗದಂತೆ ತಡೆಯಲು ಪೊಲೀಸರು ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡಿದ್ದಾರೆ. ಪ್ರತಿಭಟನಾಕಾರರನ್ನು ಅಲ್ಲಲ್ಲಿ ತಡೆದು ವಶಕ್ಕೆ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಕೆಆರ್ ಪುರಂನಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವಾರು ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ಕೆಆರ್ ಪುರಂ ಸಂತೆಯಿಂದ ಬಿಬಿಎಂಪಿ ಕಚೇರಿಯವರೆಗೆ ಕಾಲ್ನಡಿಗೆ ಜಾಥಾದಲ್ಲಿ ಕೋಡಿಹಳ್ಳಿ ಚಂದ್ರಶೇಖರ್, ಅಖಿಲ ಕರ್ನಾಟಕ ರೈತರು ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್ ಸೇರಿದಂತೆ ನೂರಾರು ರೈತರು ಭಾಗಿಯಾಗಿದ್ದರು. ಈ ವೇಳೆ ಬಿಬಿಎಂಪಿ ಕಚೇರಿ ಬಳಿ ಕೋಡಿಹಳ್ಳಿ ಚಂದ್ರಶೇಖರ್ ಮೊದಲಾದವರನ್ನು ಪೊಲೀಸರು ವಶಕ್ಕೆ ಪಡೆದರು.

ಟೌನ್​ಹಾಲ್​ನಿಂದ ಫ್ರೀಡಂ ಪಾರ್ಕ್​ವರೆಗೆ ಸಾಗಲಿರುವ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಾಕಷ್ಟು ಜನಸಾಗರ ಹರಿದುಬರುತ್ತಿದೆ. ರಾಜ್ಯದ ವಿವಿಧೆಡೆಯಿಂದ ರೈತರು ಬೆಂಗಳೂರಿಗೆ ಆಗಮಿಸಿದ್ದಾರೆ. ನಟ ಚೇತನ್, ಬಿಗ್ ಬಾಸ್ ಸ್ಪರ್ಧಿ ಶಶಿ ಮೊದಲಾದವರು ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಸುಮನಹಳ್ಳಿಯಿಂದ ಟೌನ್​ಹಾಲ್​ವರೆಗೆ ಬೈಕ್ ರ್ಯಾಲಿ ನಡೆಯುತ್ತಿದೆ. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಸಂಘಟನೆಗಳ ಕಾರ್ಯಕರ್ತರು, ಗಿರೀಶ್ ಗೌಡ, ಕುರುಬೂರು ಶಾಂತಕುಮಾರ್, ನಟ ಚೇತನ್ ಟೌನ್ ಹಾಲ್​ನಲ್ಲಿ ಈಗಾಗಲೇ ಬಹಳಷ್ಟು ಜನರು ಈ ಬೈಕ್ ಜಾಥಾದಲ್ಲಿದ್ದಾರೆ.

ಟಾನ್ ಹಾಲ್​ನಲ್ಲಿ ಪೊಲೀಸರು ಭದ್ರತೆ ಬಿಗಿಗೊಳಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಇಲ್ಲಿಂದ ಪ್ರತಿಭಟನಾ ಮೆರವಣಿಗೆ ಹೊರಡುವುದರಿಂದ 200ಕ್ಕೂ ಹೆಚ್ಚು ಪೊಲೀಸರನ್ನು ಇಲ್ಲಿ ನಿಯೋಜಿಸಲಾಗಿದೆ. ಹಾಗೆಯೇ, ಮೆರವಣಿಗೆ ಸಾಗುವ ಹಾದಿಯ ಸುತ್ತಮುತ್ತ ಕಟ್ಟೆಚ್ಚರಿಕೆ ವಹಿಸಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ನೀತಿ ವಿರುದ್ಧ ರೈತ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್ ಇವತ್ತು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಇದೆ. ದಲಿತರು, ಕಾರ್ಮಿಕರ ಸಂಘಟನೆಗಳು, ಕನ್ನಡ ಸಂಘಟನೆಗಳು ಈ ಬಂದ್​ಗೆ ಬೆಂಬಲ ವ್ಯಕ್ತಪಡಿಸಿವೆ.

Comments are closed.