ಕರ್ನಾಟಕ

ರಾಜ್ಯದಲ್ಲಿ 4 ದಿನ ಭಾರೀ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ 4 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇಂದಿನಿಂದ 4 ದಿನ ಕೇರಳ, ಅಸ್ಸಾಂ ಮತ್ತು ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಮಹಾರಾಷ್ಟ್ರದ ಕರಾವಳಿ ಪ್ರದೇಶ, ಕೇರಳದ ಉತ್ತರ ಭಾಗ ಮತ್ತು ಕರ್ನಾಟಕದ ಕರಾವಳಿಯಲ್ಲೂ ಮಳೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಈ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರ್ನಾಟಕ, ಕೇರಳ, ಅಸ್ಸಾಂ ಮತ್ತು ಮೇಘಾಲಯದ ಬಹುತೇಕ ಭಾಗಗಳಲ್ಲಿ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಈ ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ಮಹಾರಾಷ್ಟ್ರ, ಕೇರಳ, ಕರ್ನಾಟಕದಲ್ಲಿ ಇಂದು ಮಳೆಯ ಪ್ರಮಾಣ ಹೆಚ್ಚಾಗಲಿದೆ. ಇಂದಿನಿಂದ ಭಾನುವಾರದವರೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳು ಮತ್ತು ಗೋವಾದಲ್ಲಿ ಮಳೆ ಹೆಚ್ಚಾಗಲಿದೆ.

ಕೇರಳದ ಮಲಪ್ಪುರಂ, ಕೋಝಿಕೋಡ್, ವಯನಾಡ್, ಕಣ್ಣೂರ್​ ಜಿಲ್ಲೆಗಳಲ್ಲಿ ಇಂದಿನಿಂದ ಭಾನುವಾರದವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಕೇರಳದಲ್ಲಿ ಇಂದು ಗಂಟೆಗೆ 45ರಿಂದ 55 ಕಿ.ಮೀ. ವೇಗದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ತ್ರಿಶೂರ್​, ಕಾಸರಗೋಡು, ಪಲಕ್ಕಾಡ್ ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ ಘೋಷಿಸಲಾಗಿದೆ.

ಇಂದು ಮತ್ತು ನಾಳೆ ರಾಜ್ಯದ ಬಹುತೇಕ ಕಡೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Comments are closed.