ರಾಷ್ಟ್ರೀಯ

ದೇಶದಲ್ಲಿ ಇಂದು 95,735 ಕೊರೋನಾ ಪ್ರಕರಣಗಳು ಪತ್ತೆ: 1,172 ಮಂದಿ ಸಾವು

Pinterest LinkedIn Tumblr


ನವದೆಹಲಿ: ದೇಶದಲ್ಲಿ ಇಂದು 95,735 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 1,172 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ.

ದೇಶದಲ್ಲಿ ಕೊರೋನಾ ಸೋಂಕು ಹರಡುವಿಕೆ ಸುನಾಮಿ ಸ್ವರೂಪ ಪಡೆದುಕೊಂಡಿದ್ದು ಅತಿ ಹೆಚ್ಚು ಕೊರೊನಾ ಸೋಂಕು ಪೀಡಿತರರಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಬ್ರಿಜಿಲ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನ ತಲುಪಿದೆ. ಅದೂ ಅಲ್ಲದೆ ಈಗ ದೇಶದ ಕೊರೊನಾ ಸೋಂಕು ಪೀಡಿತರ ಸಂಖ್ಯೆ 44 ಲಕ್ಷದ ಗಡಿ ದಾಟಿದೆ. ಜೊತೆಗೆ ದಿನವೊಂದರಲ್ಲಿ 95 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳಲು ಆರಂಭಿಸಿದೆ. ದೇಶದಲ್ಲಿ ಆಗಸ್ಟ್ 6 ನಂತರ ಪ್ರತಿ ದಿನ 60 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು. ಆಗಸ್ಟ್‌ 19ರ ನಂತರ ಪ್ರತಿದಿನ ಸುಮಾರು 70 ಸಾವಿರ ಪ್ರಕರಣಗಳು ಕಾಣಿಸಿಕೊಳ್ಳಲಾರಂಭಿಸಿದವು. ಆಗಸ್ಟ್ 26ರಿಂದ 75 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು.‌

ಸೆಪ್ಟೆಂಬರ್ 2ರಿಂದ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಸೆಪ್ಟೆಂಬರ್ 5ರಿಂದ ಪ್ರತಿದಿನ 90 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಲು ಆರಂಭಿಸಿದವು. ಸೆಪ್ಟೆಂಬರ್ 7ರಂದು ಸ್ವಲ್ಪ ಕಡಿಮೆಯಾಗಿ 75,809 ಪ್ರಕರಣಗಳು ಮಾತ್ರ ವರದಿಯಾಗಿದ್ದವು. ಸೆಪ್ಟೆಂಬರ್ 8ರಂದು 89,706 ಪ್ರಕರಣಗಳು ಕಂಡುಬಂದಿದ್ದವು. ಆದರೆ, ಸೆಪ್ಟೆಂಬರ್ 9ರಂದು ದಿಢೀರನೆ 95,735 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದ ಕೊರೋನಾ ಪೀಡಿತರ ಸಂಖ್ಯೆ 44,65,864ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಬುಧವಾರ 1,172 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಇದರಿಂದ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 75,062ಕ್ಕೆ ಏರಿಕೆಯಾಗಿದೆ.

Comments are closed.