ಕರ್ನಾಟಕ

ಡಿಜೆ ಹಳ್ಳಿ ಗಲಭೆ ಪ್ರಕರಣ: ಶಾಸಕರ ನಿವಾಸಕ್ಕೆ ಬೆಂಕಿ ಹಚ್ಚಿದ್ದ ಆರೋಪಿ ಮುಜಾಯಿದ್ ಅರೆಸ್ಟ್

Pinterest LinkedIn Tumblr


ಬೆಂಗಳೂರು: ಇಲ್ಲಿನ ಡಿಜೆ ಹಳ್ಳಿ ಗಲಭೆಯ ಸಂದರ್ಭ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಲು ಕುಮ್ಮಕ್ಕು ನೀಡಿದ್ದ ಆರೋಪಿದಡಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಗಲಭೆ ನಡೆದ ನಂತರ ನಾಪತ್ತೆಯಾಗಿದ್ದ ಮುಜಾಯಿದ್ ಅಕಾ ವಾಟರ್ ಮುಜ್ಜು ಬಂಧಿತ ಆರೋಪಿ. ಚಾಮರಾಜಪೇಟೆಯಲ್ಲಿ ಸಂಬಂಧಿಕರ ಮನೆಯಲ್ಲಿ ಅಡಗಿದ್ದ ಅತನನ್ನು ಸೆರೆ ಹಿಡಿಯಲು ಪೊಲೀಸರು ಯಶಸ್ವಿಯಾಗಿದ್ದಾರೆ. ಆ ಏರಿಯಾದಲ್ಲಿ ವಾಟರ್ ಮ್ಯಾನ್ ಆಗಿದ್ದ ಮುಜಾಯಿದ್ ಗಲಭೆಯ ದಿನ ನೂರಾರು ಜನರಿಗೆ ಶಾಸಕರ ವಿರುದ್ಧ ಪ್ರಚೋದನೆ ನೀಡಿದ್ದನೆನ್ನಲಾಗಿದೆ. ಪುಲಿಕೇಶಿ ನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಈ ವಾಟರ್ ಮ್ಯಾನ್ ಪಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಘಟನೆ ನಡೆದಾಗಿನಿಂದ ನಾಪತ್ತೆಯಾಗಿದ್ದ ಆತ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕೋಲಾರ, ಮುಳಬಾಗಿಲು, ರಾಮನಗರ ಮೊದಲಾದೆಡೆ ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿದ್ದ. ಬೆಂಗಳೂರಿನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ಮುಳುಗಿಹೋಗಿರುತ್ತಾರೆಂದು ಭಾವಿಸಿ ಆತ ಬೆಂಗಳೂರಿಗೆ ವಾಪಸ್ ಬಂದಿದ್ದನೆನ್ನಲಾಗಿದೆ.

ಆದರೆ, ಪೊಲೀಸರು ಹುಡುಕಾಟ ಮಾತ್ರ ನಿಲ್ಲಿಸಿರಲಿಲ್ಲ. ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಈತ ಉಳಿದುಕೊಂಡಿರುವ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದ್ದಾರೆ. ಆರೋಪಿ ವಾಟರ್ ಮುಜ್ಜು ಡಿಜೆ ಹಳ್ಳಿಯಲ್ಲಿ ಗಲಭೆಯಾದ ದಿನ ಜನರಿಗೆ ಪ್ರಚೋದನೆ ನೀಡಿದವರಲ್ಲಿ ಒಬ್ಬ. ಡಿಜೆ ಹಳ್ಳಿ ಪೊಲೀಸ್ ಠಾಣೆಯಿಂದ ನೂರಕ್ಕೂ ಹೆಚ್ಚು ಜನರನ್ನು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಕರೆದುಕೊಂಡು ಹೋಗಿದ್ದ. ನವೀನ್ ಹಾಕಿದ್ದ ಫೇಸ್​ಬುಕ್ ಪೋಸ್ಟ್ ಅನ್ನು ನೆಪವಾಗಿರಿಸಿಕೊಂಡು ಶಾಸಕರ ವಿರುದ್ಧ ಜನಸಮೂಹ ಕೆರಳುವಂತೆ ಕುಮ್ಮಕ್ಕು ಕೊಟ್ಟಿದ್ದ. ಶಾಸಕರ ಮನೆಗೆ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳನ್ನ ಧ್ವಂಸ ಮಾಡಿದ್ದ. ಪೆಟ್ರೋಲ್ ಸುರಿದು ಬೆಂಕಿಯನ್ನೂ ಹಚ್ಚಿದ್ದ ಎನ್ನಲಾಗಿದೆ.

ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ಅವರು ಫೇಸ್​ಬುಕ್​ನಲ್ಲಿ ಪ್ರವಾದಿ ಪೈಗಂಬರ್ ಬಗ್ಗೆ ಅವಹೇಳನಕಾರಿ ಕಾಮೆಂಟ್ ಹಾಕಿದ್ದರು. ಅದೇ ದಿನ, ಅಂದರೆ ಆಗಸ್ಟ್ 11ರ ರಾತ್ರಿಯೇ ಡಿಜೆ ಹಳ್ಳಿಯಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿ ಬಳಿಕ ಗಲಭೆ ಮಾಡಿದ್ದರು. ನವೀನ್ ಮೇಲೆ ದೂರು ಕೊಟ್ಟರೂ ಕ್ರಮ ಜರುಗಿಸಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆಂದು ಹೇಳಿ ಮುಸ್ಲಿಮ್ ಸಮುದಾಯದ ಜನರು ಗಲಭೆಗೆ ಇಳಿದಿದ್ದರು. ಎರಡು ಪೊಲೀಸ್ ಠಾಣೆಗಳನ್ನ ಸುಟ್ಟು ಹಾಕಿದರು. ಅನೇಕ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆ ತಂದರು. ಡಿಜೆ ಹಳ್ಳಿಯಲ್ಲಿದ್ದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯನ್ನು ಸುಟ್ಟರು. ದೇವರ ಜೀವನ ಹಳ್ಳಿ, ಕಾಡುಗೊಂಡನ ಹಳ್ಳಿ, ಕಾವಲ್ ಬೈರಸಂದ್ರ ಪ್ರದೇಶಗಳು ಹೊತ್ತಿ ಉರಿದವು. ಕಾವಲ್ ಬೈರಸಂದ್ರದಲ್ಲಿರುವ ನವೀನ್ ಮನೆಯನ್ನೂ ದುಷ್ಕರ್ಮಿಗಳು ದಾಳಿ ನಡೆಸಿದರು.

ಕಳೆದ ತಿಂಗಳು ನಡೆದ ಗಲಭೆಯೂ ನಿಯಂತ್ರಣ ತಪ್ಪಬಹುದು ಎನ್ನುವಾಗ ಪೊಲೀಸರು ಫೈರಿಂಗ್ ಮಾಡಿದ್ದರಿಂದ ಮೂವರು ಮೃತಪಟ್ಟಿದ್ದರು.

Comments are closed.