ಕರ್ನಾಟಕ

ಮಲೆನಾಡಿನಲ್ಲಿ ಮುಂದುವರೆದ ಮಳೆಯ ಅಬ್ಬರ

Pinterest LinkedIn Tumblr


ಚಿಕ್ಕಮಗಳೂರು (ಸೆಪ್ಟೆಂವಬರ್​ 4): ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸಂಜೆಯಿಂದ ವರುಣದೇವ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ನಿನ್ನೆ ಕೂಡ ಹಗಲಲ್ಲಿ ಮೋಡ ಕವಿದ ವಾತಾವರಣವಿದ್ದು ಸಂಜೆ ವೇಳೆಗೆ ಆರಂಭವಾದ ಮಳೆ ಮಲೆನಾಡಿನ ಕೆಲ ಭಾಗದಲ್ಲಿ ಇಡೀ ರಾತ್ರಿ ಸುರಿದಿತ್ತು. ಇಂದು ಕೂಡ ಬೆಳಗ್ಗೆಯಿಂದ ಬಿಡುವು ನೀಡಿದ್ದ ವರುಣದೇವ ಸಂಜೆ ನಾಲ್ಕು ಗಂಟೆಯಿಂದ ಧಾರಾಕಾರವಾಗಿ ಸುರಿದಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ, ಶೃಂಗೇರಿ ಹಾಗೂ ಬಾಳೆಹೊನ್ನೂರಿನಲ್ಲಿ ಮಳೆ ಅಬ್ಬರ ಕಂಡು ಮಲೆನಾಡಿಗರು ಕಂಗಾಲಾಗಿದ್ದಾರೆ. ಕೊಪ್ಪ ತಾಲೂಕಿನಲ್ಲೂ ಧಾರಾಕಾರ ಮಳೆ ಸುರಿದಿದ್ದು ಜನ ಆತಂಕಕ್ಕೀಡಾಗಿದ್ದಾರೆ. ಬಾಳೆಹೊನ್ನೂರಿನಲ್ಲಿ ಮಧ್ಯಾಹ್ನ 2 ಗಂಟೆಯಿಂದ 3 ಗಂಟೆಯ ಅವಧಿಯಲ್ಲಿ ಸುಮಾರು 40-50 ನಿಮಿಷಗಳ ಕಾಲದ ಮಳೆ ಬಾಳೆಹೊನ್ನೂರಿಗರಲ್ಲಿ ಭಯ ಹುಟ್ಟಿಸಿತ್ತು. ಸುಮಾರು ಒಂದೇ ಗಂಟೆಯಲ್ಲಿ 4-5 ಇಂಚಿನಷ್ಟು ಮಳೆ ಸುರಿದಿದ್ದು ಮಳೆ ನೀರು ಭತ್ತದ ಗದ್ದೆಗಳ ಮೇಲೆ ನದಿಯಂತೆ ಹರಿದಿದೆ.

ಭಾರೀ ಮಳೆಗೆ ಬಾಳೆಹೊನ್ನೂರು ಸಮೀಪದ ದೋಬಿಹಳ್ಳ ಕೂಡ ಮನಸ್ಸೋ ಇಚ್ಛೆ ಹರಿದಿದ್ದು, ಹಳ್ಳದ ಅಕ್ಕಪಕ್ಕದ ಹೊಲಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ಎನ್.ಆರ್.ಪುರ ಹಾಗೂ ಶೃಂಗೇರಿ ತಾಲೂಕಿನಲ್ಲಿ ಭಾರೀ ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದೆ. ಇನ್ನೂ ಮೂಡಿಗೆರೆ ತಾಲೂಕಿನಲ್ಲೂ ಬಿಟ್ಟು-ಬಿಟ್ಟು ಮಳೆ ಸುರಿದಿದ್ದು ಜನ ಭಯಭೀತರಾಗಿದ್ದಾರೆ. ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್ ಸುತ್ತಮುತ್ತ ವರುಣದೇವ ಅಬ್ಬರ ಕಂಡು ಮಲೆನಾಡಿಗರು ಮತ್ತೊಮ್ಮೆ 2019ರ ಕಷ್ಟ-ಕಾರ್ಪಣ್ಯಗಳನ್ನ ನೆನೆದು ವರುಣದೇವನಿಗೆ ಕೈಮುಗಿದಿದ್ರು. ಇನ್ನೂ ಜಿಲ್ಲೆಯ ಬಯಲುಸೀಮೆ ತರೀಕೆರೆ ತಾಲೂಕಿನ ಕೆಲ ಭಾಗದಲ್ಲೂ ಭಾರೀ ಮಳೆ ಸುರಿದಿದೆ.

ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಆಗುತ್ತಿದೆ. ಇದೇ ಮಳೆ ಮುಂದಿನ ಕೆಲ ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Comments are closed.