
ಬೆಂಗಳೂರು(ಸೆ.01): ಸ್ಯಾಂಡಲ್ವುಡ್ ನಟ ನಟಿಯರ ಡ್ರಗ್ಸ್ ಸೇವನೆ ಬಗ್ಗೆ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಳಿಕ ಸಿಸಿಬಿ ಕಚೇರಿಗೆ ಆಗಮಿಸಿ ತಮ್ಮ ಬಳಿಯಿದ್ದ ಮಾಹಿತಿಯನ್ನ ಪೊಲೀಸರ ಮುಂದೆ ಹಂಚಿಕೊಂಡಿದ್ದರು. ನಿನ್ನೆ ಐದು ಗಂಟೆ ಕಾಲ ಸಿಸಿಬಿ ಪೊಲೀಸರು ಇಂದ್ರಜಿತ್ ಲಂಕೇಶ್ ವಿಚಾರಣೆ ನಡೆಸಿ ಅವರಿಂದ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು.
ಇಂದ್ರಜಿತ್ ಲಂಕೇಶ್ ವಿಚಾರಣೆ ಬಗ್ಗೆ ಅಪರಾಧ ವಿಭಾಗ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಕೆಲವು ಸ್ಪಷ್ಟನೆಗಳನ್ನ ನೀಡಿದ್ದಾರೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಸ್ಯಾಂಡಲ್ವುಡ್ನ ಯುವ ಪೀಳಿಗೆಯ ನಟ ನಟಿಯರು ಡ್ರಗ್ಸ್ ಸೇವನೆ ಬಗ್ಗೆ ಹೇಳಿಕೆಯನ್ನ ನೀಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿ ತಮ್ಮ ಬಳಿಯಿರುವ ಪೂರಕವಾದ ಸಾಕ್ಷ್ಯಗಳನ್ನ ನೀಡುವಂತೆ ಸಿಸಿಬಿ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿತ್ತು. ಸೋಮವಾರ ಇಂದ್ರಜಿತ್ ಲಂಕೇಶ್ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಅಗಮಿಸಿ ಕೆಲವು ಉಪಯುಕ್ತ ಮಾಹಿತಿ ಮತ್ತು ಕೆಲವರ ಹೆಸರುಗಳನ್ನ ನೀಡಿದ್ದಾರೆ. ಸಿಸಿಬಿ ಪೊಲೀಸರು ಇಂದ್ರಜಿತ್ ನೀಡಿದ ಹೆಸರುಗಳನ್ನ ಪರಿಶೀಲನೆ ನಡೆಸಿ ತನಿಖೆಯನ್ನ ಸಹ ಆರಂಭ ಮಾಡಿದೆ ಎಂದರು.
ಇಂದ್ರಜಿತ್ ಲಂಕೇಶ್ ಅವರು ಡ್ರಗ್ಸ್ ಸೇವನೆ ಬಗ್ಗೆ ಕೆಲವು ಈ ಹಿಂದಿನ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ನಟರು ಮತ್ತು ಗಣ್ಯ ವ್ಯಕ್ತಿಗಳು ಪಾಲ್ಗೊಂಡಿದ್ದು, ಅವುಗಳನ್ನ ಉಲ್ಲೇಖ ಮಾಡಿದ್ದಾರೆ. ಹಾಗೂ ಕೆಲವು ವ್ಯಕ್ತಿಗಳ ಹೆಸರು ಸಹ ಸೂಚಿಸಿದ್ದಾರೆ. ಅದರೆ ಅದಕ್ಕೆ ಪೂರಕವಾದ ಯಾವುದೇ ವಿಡಿಯೋ, ಪೋಟೊ ಅಥವಾ ದಾಖಲೆಗಳು ಒದಗಿಸಿಲ್ಲ. ಅದ್ದರಿಂದ ಮತ್ತೊಮ್ಮೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗುವುದು. ಹಾಗೂ ಅವರ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನ ಒದಗಿಸುವಂತೆ ಸೂಚಿಸಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ಡ್ರಗ್ಸ್ ದಂಧೆ ಬಗ್ಗೆ ಕಠಿಣ ಹೋರಾಟ ಮತ್ತು ಕ್ರಮದ ಅವಶ್ಯಕತೆ ಇದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಒತ್ತಾಯಿಸಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ಸ್ ಸಂಬಂಧ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ. 2011 ರಲ್ಲಿ ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಡ್ರಗ್ ಪೆಡ್ಲರ್ ಆಗಿದ್ದ ಮಾರ್ಟಿನ್ ಡ್ಯೂಕ್ ಎಂಬಾತನನ್ನ ಬಂಧಿಸಲಾಗಿತ್ತು. ನೈಜೀರಿಯಾ ಮೂಲದ ಈತನ ಮೇಲೆ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಹಾಗೂ 2019ರಲ್ಲಿ 60 ಡ್ರಗ್ಸ್ ಪೆಡ್ಲರ್ ಗಳನ್ನ ಪೆರೇಡ್ ಮಾಡಲಾಗಿತ್ತು. ಅದ್ದರಿಂದ ಡ್ರಗ್ಸ್ ಸೇವನೆ ಮಾರಾಟ ತಡೆಗಟ್ಟಲು ಕಠಿಣ ಹೋರಾಟದ ಅಗತ್ಯವಿದೆ ಎಂದು ಅಲೋಕ್ ಕುಮಾರ್ ಟ್ವೀಟ್ ಮಾಡಿ ಡ್ರಗ್ಸ್ ವಿರುದ್ಧ ತಾವು ಕೈಗೊಂಡಿದ್ದ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Comments are closed.