
ಬೆಂಗಳೂರು (ಆಗಸ್ಟ್ 26): ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ಆರ್ಥಿಕ ಚಟುವಟಿಕೆಗಳು ಸರಾಗವಾಗಿ ನಡೆಯಲು ಅನುವು ಮಾಡಿ ಕೊಡಲಾಗಿದೆ. ಆದರೆ, ಸಿನಿಮಾ ಥಿಯೇಟರ್, ಶಾಲಾ-ಕಾಲೇಜುಗಳ ಬಾಗಿಲು ಇನ್ನೂ ತೆರೆದಿಲ್ಲ. ಈಗ ಅವುಗಳ ರೀ ಒಪನ್ ಆಗೋದು ಯಾವಾಗ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ.
ಕೊರೋನಾ ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಲಾಕ್ ಡೌನ್ ಅಸ್ತ್ರ ಬಳಕೆ ಮಾಡಲಾಗಿತ್ತು. ಇದರಿಂದಾಗಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಹೊರತು ಪಡಿಸಿ ಉಳಿದ ತರಗತಿಗಳ ಪರೀಕ್ಷೆಗಳೆಲ್ಲವೂ ರದ್ದಾಗಿದ್ದವು. ಅವರುಗಳ ಹಳೇ ಅಂಕಗಳನ್ನ ಪರಿಗಣಿಸಿ ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗಿದೆ. ಈ ನಡುವೆ ಈಗಾಗಲೇ ಶುರುವಾಗಬೇಕಿದ್ದ ಶೈಕ್ಷಣಿಕ ತರಗತಿಗಳೆಲ್ಲ ಲಾಕ್ಡೌನ್ನಿಂದಾಗಿ ನಿಂತಿದೆ.
ಈ ಹಿಂದೆ ಜುಲೈನಲ್ಲಿ ರಾಜ್ಯದ ಶಾಲೆಗಳು ಆರಂಭ ಮಾಡಲು ಚಿಂತನೆ ನಡೆಸಲಾಗಿತ್ತು. ಆದರೆ ಜೂನ್ನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ, ದ್ವಿತೀಯ ಪಿಯುಸಿಯ ಕೊನೆಯ ಪರೀಕ್ಷೆ ಕಾರಣ ಶಾಲಾ- ಕಾಲೇಜು ರೀ ಓಪನಿಂಗ್ ದಿನಾಂಕವನ್ನು ಮತ್ತೆ ಮುಂದೂಡಲಾಗಿತ್ತು. ಇದಲ್ಲದೆ ದೇಶದಲ್ಲಿ ಏಕಾಏಕಿ ಕೊರೋನಾ ಹೆಚ್ಚುತ್ತಿರುವುದರಿಂದ ಸೆಪ್ಟೆಂಬರ್ನಲ್ಲಿ ಶಾಲಾ-ಕಾಲೇಜು ಆರಂಭವಾಗಲಿದೆ ಎಂದು ಅಂದಾಜಿಸಲಾಗಿತ್ತು.
ಆದರೆ ಇದೀಗ ಸೆಪ್ಟೆಂಬರ್ ಅಂತ್ಯದವರೆಗೆ ಆನ್ಲೈನ್ ಕ್ಲಾಸ್ಗಳು ನಡೆಯಲಿವೆಯಂತೆ. ಬಳಿಕ ಅಕ್ಟೋಬರ್ ನಿಂದ ಆಫ್ಲೈನ್ ಅಂದರೆ ಶಾಲಾ-ಕಾಲೇಜು ಆರಂಭವಾಗಲಿರುವ ಸುಳಿವು ಸಿಕ್ಕಿದೆ. ಈ ಬಗ್ಗೆ ಉನ್ನತ ಮೂಲಗಳು ಖಚಿತ ಪಡಿಸಿವೆ. ಆಗಸ್ಟ್ ಅಂತ್ಯಕ್ಕೆ ಅನ್ ಲಾಕ್ 3 ಮುಗಿಯಲಿದ್ದು, ಸೆಪ್ಟೆಂಬರ್ಗೆ ಅನ್ ಲಾಕ್ 4 ಶುರುವಾಗಲಿದೆ. ಹೀಗಾಗಿ ಎಲ್ಲರ ಚಿತ್ತ ಕೇಂದ್ರ ಸರ್ಕಾರದ ನಿರ್ಧಾರದತ್ತ ನೆಟ್ಟಿದೆ.
Comments are closed.