ಕರ್ನಾಟಕ

ಆಲಮಟ್ಟಿ ಜಲಾಶಯ ಭರ್ತಿ; ಭಾರೀ ಪ್ರಮಾಣದ ನೀರು ಹೊರಕ್ಕೆ

Pinterest LinkedIn Tumblr


ವಿಜಯಪುರ (ಆ. 8): ಎಲ್ಲಿ ನೋಡಿದರೂ ನೀರು. ಒಳಹರಿವು ನೋಡಲು ಚೆಂದ. ಹೊರ ಹರಿವು ವೀಕ್ಷಿಸಲು ಆನಂದ. ಜಲರಾಶಿ ನೋಡಿದರೆ ಮನದಾನಂದ. ಬಸವನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರ ಈಗ ಬಹುತೇಕ ಭರ್ತಿಯಾಗಿದೆ. ಆಲಮಟ್ಟಿ ಡ್ಯಾಂನಲ್ಲಿ ಈಗ ಎಲ್ಲಿ ಕಣ್ಣು ಹಾಯಿಸಿದರೂ ನೀರೇ ನೀರು ಕಾಣಿಸುತ್ತಿದೆ.

ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯ ಈಗ ನೀರಿನಿಂದ ಕಂಗೊಳಿಸುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿಯೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಘಟಪ್ರಭಾ ನದಿಗೆ ಬರುವ ನೀರು ಬಾಗಲಕೋಟೆ ಬೀಳಗಿ ತಾಲೂಕಿನ ಚಿಕ್ಕಸಂಗಮದ ಬಳಿ ಕೃಷ್ಣಾ ನದಿಗೆ ಸೇರುತ್ತಿದೆ. ಹೀಗಾಗಿ ಎರಡೂ ನದಿಯ ನೀರು ಸೇರಿಕೊಂಡು ಆಲಮಟ್ಟಿ ಜಲಾಶಯದಲ್ಲಿ ಸಂಗ್ರಹವಾಗುತ್ತಿದೆ.

ನಿನ್ನೆಗೆ ಹೋಲಿಸಿದರೆ ಇಂದು ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹೊರ ಹರಿವಿನ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದೆ. ಆಲಮಟ್ಟಿ ಜಲಾಷಯದಲ್ಲಿ ಈಗ 517.81 ಮೀ. ವರೆಗೆ ನೀರು ಸಂಗ್ರಹವಾಗಿದ್ದು, 95.058 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಷಯಕ್ಕೆ ಈಗ 1 ಲಕ್ಷ 51 ಸಾವಿರದ 598 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಎಲ್ಲ 26 ಕ್ರಸ್ಟಗೇಟ್ ಗಳನ್ನು ತೆರೆದು 1 ಲಕ್ಷ 75 ಸಾವಿರದ 672 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಅಷ್ಟೇ ಅಲ್ಲ, ಕೆಪಿಸಿಎಲ್ ಅಧೀನದಲ್ಲಿರುವ ವಿದ್ಯುತ್ ಉತ್ಪಾದನೆ ಘಟಕಗಳಲ್ಲಿ ಈಗ 250 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯೂ ಆರಂಭವಾಗಿದೆ. ಆಲಮಟ್ಟಿಯಿಂದ ಬಿಡಲಾಗುವ ನೀರು ಕೃಷ್ಣಾ ನದಿಯ ಮೂಲಕ ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯಕ್ಕೆ ಸೇರುತ್ತದೆ. ಈ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದ ಹಿನ್ನೀರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಯಾವುದೇ ರೀತಿಯಲ್ಲಿ ಪ್ರವಾಹಕ್ಕೆ ಕಾರಣವಾಗದಂತೆ ವಿಜಯಪುರ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದೆ.

ಅಷ್ಟೇ ಅಲ್ಲ, ಈಗಾಗಲೇ ಕೃಷ್ಣಾ ನದಿ ತೀರದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದರಿಂದ ರೈತರು ನದಿ ತೀರದಲ್ಲಿದ್ದ ತಮ್ಮ ವಿದ್ಯುತ್ ಪಂಪ್​ಸೆಟ್ ಗಳನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರಿಂದ ವಿಜಯಪುರ ಜಿಲ್ಲೆಯಲ್ಲಿ ಪ್ರವಾಹದ ಆತಂಕ ಸದ್ಯಕ್ಕಂತೂ ಇಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ್​ ಕುಮಾರ್ ತಿಳಿಸಿದ್ದಾರೆ.

Comments are closed.