ಕರ್ನಾಟಕ

ಅಯೋಧ್ಯೆಯಲ್ಲಿ ರಾಜ್ಯಕ್ಕೆ 2 ಎಕರೆ ಭೂಮಿ ನೀಡುವಂತೆ ಯುಪಿ ಮುಖ್ಯಮಂತ್ರಿ ಯೋಗಿಗೆ, ಯಡಿಯೂರಪ್ಪ ಪತ್ರ

Pinterest LinkedIn Tumblr


ಬೆಂಗಳೂರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಿಎಂ ಯಡಿಯೂರಪ್ಪ, ಇದೇ ತಿಂಗಳ 5ನೇ ತಾರೀಖು ನಡೆದ ರಾಮಮಂದಿರಕ್ಕೆ ಅಡಿಗಲ್ಲು ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಸಿಎಂ ಬಿಎಸ್​ವೈ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಕರ್ನಾಟಕ ರಾಜ್ಯದಿಂದ ಅಯೋಧ್ಯೆಗೆ ಸಾವಿರಾರು ಜನರು ಭೇಟಿ ನೀಡುತ್ತಾರೆ. ಹಾಗಾಗಿ ಅಯೋಧ್ಯೆಯಲ್ಲಿ ಕರ್ನಾಟಕ ಸರ್ಕಾರಕ್ಕೆ 2 ಎಕರೆ ಭೂಮಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ರಾಜ್ಯದಿಂದ ಅಯೋಧ್ಯೆಗೆ ಭಕ್ತರು ಭೇಟಿ ನೀಡುತ್ತಾರೆ. ಅವರಿಗಾಗಿ ಯಾತ್ರಿ ನಿವಾಸ ನಿರ್ಮಾಣ ಮಾಡಬೇಕಾಗಿದೆ. ಈ ಉದ್ದೇಶದಿಂದ ಕರ್ನಾಟಕಕ್ಕೆ ಉತ್ತರಪ್ರದೇಶ ಸರ್ಕಾರ ಎರಡು ಎಕರೆ ಜಾಗ ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಹಲವು ದಶಕಗಳ ಅಯೋಧ್ಯೆ ಸಮಸ್ಯೆ ಸುಪ್ರೀಂಕೋರ್ಟ್​ನಲ್ಲಿ ತೀರ್ಮಾನವಾಗಿ, ರಾಮಮಂದಿರ ನಿರ್ಮಾಣಕ್ಕೆ ಇದ್ದ ಕಾನೂನು ತೊಡಕು ನಿವಾರಣೆಯಾಗಿತ್ತು. ಇದೇ ತಿಂಗಳ 5ನೇ ತಾರೀಖು ಭವ್ಯ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ್ದರು.

Comments are closed.