
ಶಿವಮೊಗ್ಗ (ಆ. 6): ಮಲೆನಾಡಿನಲ್ಲಿ ಐದಾರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಶಿವಮೊಗ್ಗದ ಸಾಗರ, ಹೊಸನಗರ, ತೀರ್ಥಹಳ್ಳಿಯಲ್ಲಿ ಮಳೆ ಹೆಚ್ಚಾಗಿರುವುದರಿಂದ ನದಿಗಳು ತುಂಬಿ ಹರಿಯುತ್ತಿವೆ. ಶರಾವತಿ ಹಿನ್ನೀರಿನಲ್ಲಿ ಸಾಗರದಿಂದ ಗೆಣಸಿನ ಕುಣಿ, ಕೆ.ಬಿ. ಸರ್ಕಲ್, ಸಂಪೆಕಟ್ಟೆ, ನಿಟ್ಟೂರಿಗೆ ಸಂಪರ್ಕ ಕಲ್ಪಿಸುವ ಹಸಿರುಮಕ್ಕಿಯಲ್ಲಿ ಇಂದು ಲಾಂಚ್ ಸಿಕ್ಕಿಹಾಕಿಕೊಂಡಿತ್ತು. 25ಕ್ಕೂ ಹೆಚ್ಚು ಜನರು ಸಾಗುತ್ತಿದ್ದ ಲಾಂಚ್ ಹಸಿರುಮಕ್ಕಿಯಲ್ಲಿ ಶರಾವತಿ ಹಿನ್ನೀರಿನಲ್ಲಿ ಸಿಲುಕಿತ್ತು.
ಸಾಗರದಿಂದ ಹೊಸನಗರದ ಸಂಪೆಕಟ್ಟೆ, ನಿಟ್ಟೂರಿಗೆ ಸಂಪರ್ಕ ಕಲ್ಪಿಸುವ ಹಸಿರುಮಕ್ಕಿ ಹಿನ್ನೀರು ಪ್ರದೇಶದಲ್ಲಿ ಲಾಂಚ್ನಿಂದ ಜನರು, ಬಸ್, ಕಾರುಗಳನ್ನು ದಾಟಿಸಲಾಗುತ್ತದೆ. ಈಗ ಭಾರೀ ಮಳೆಯಿಂದಾಗಿ ಹಿನ್ನೀರು ಪ್ರದೇಶದಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಲಾಂಚ್ ಮಧ್ಯದಲ್ಲಿ ಸಿಲುಕಿತ್ತು. ಇದರಿಂದ ಲಾಂಚ್ನಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಮೊಬೈಲ್ ಸಂಪರ್ಕವೂ ಇಲ್ಲದೆ 25ಕ್ಕೂ ಹೆಚ್ಚು ಪ್ರಯಾಣಿಕರು ಲಾಂಚ್ನಲ್ಲಿ ಸಿಲುಕಿದ್ದರು.
ಹಸಿರುಮಕ್ಕಿಯಲ್ಲಿ ಸೇತುವೆ ನಿರ್ಮಿಸಲು ಈಗಾಗಲೇ ಪಿಲ್ಲರ್ಗಳನ್ನು ನಿಲ್ಲಿಸಲಾಗಿದೆ. ಇಲ್ಲಿ ಇಂದು ಲಾಂಚ್ ಮೂಲಕ ಒಂದು ದಡದಿಂದ ಮತ್ತೊಂದು ದಡಕ್ಕೆ ಹೋಗುವಾಗ ಲಾಂಚ್ ಇದ್ದಕ್ಕಿದ್ದಂತೆ ನಡುನೀರಿನಲ್ಲಿ ಸ್ಥಗಿತಗೊಂಡಿತ್ತು. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಆಲಕನ ಸಮಯಪ್ರಜ್ಞೆಯಿಂದ ಲಾಂಚ್ ದಡಕ್ಕೆ ಸೇರಿದೆ.
ಭಾರೀ ಮಳೆ, ಗಾಳಿಯಿಂದ ಲಾಂಚ್ ಚಾಲಕನ ನಿಯಂತ್ರಣ ತಪ್ಪಿತ್ತು ಎನ್ನಲಾಗಿದೆ. ಸಾಗರದ ದಡದಿಂದ ಹೊಸನಗರದ ದಡಕ್ಕೆ ಲಾಂಚ್ ತಲುಪಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಶಿವಮೊಗ್ಗದ ಆಗುಂಬೆ, ಹುಲಿಕಲ್, ಸಾಗರ, ಹೊಸನಗರ, ತೀರ್ಥಹಳ್ಳಿಯ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಬಹುತೇಕ ಕಡೆ ವಿದ್ಯುತ್ ಕಡಿತಗೊಂಡಿದೆ. ಮಳೆಯಿಂದಾಗಿ ತುಂಗಾ ನದಿಯ ಗಾಜನೂರು ಡ್ಯಾಂ ಭರ್ತಿಯಾಗಿದ್ದು, ಗೇಟ್ಗಳನ್ನು ತೆರೆಯಲಾಗಿದೆ. ಹಾಗೇ, ಶರಾವತಿ, ವರಾಹಿ, ಚಕ್ರಾ, ಸಾವೆಹಕ್ಲು, ಮಾಣಿ, ಭದ್ರಾ ಡ್ಯಾಂಗಳಲ್ಲೂ ನೀರಿನ ಹರಿವು ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
Comments are closed.