
ಬೆಂಗಳೂರು: ಕರೊನಾ ಸೋಂಕಿತರೊಂದಿಗೆ ನೇರ ಸಂಪರ್ಕಕ್ಕೆ ಬಂದ 70 ಸಾವಿರ ಜನರಿಗೆ ಉಚಿತವಾಗಿ ಆಯುರ್ವೆದ ಔಷಧ ಪಡೆಯಲು ಇನ್ನೊಂದು ವಾರದಲ್ಲಿ ಸರ್ಕಾರ ಅನುಮತಿ ನೀಡುವ ವಿಶ್ವಾಸವಿದೆ ಎಂದು ಆಯುರ್ವೆದ ವೈದ್ಯ ಡಾ. ಗಿರಿಧರ ಕಜೆ ತಿಳಿಸಿದ್ದಾರೆ.
ಬಿಎಂಸಿಆರ್ಐ ನೀಡಿರುವ ನೋಟಿಸ್ ಕುರಿತು ಗೊಂದಲದ ಹಿನ್ನೆಲೆಯಲ್ಲಿ ಫೇಸ್ಬುಕ್ ಲೈವ್ ಮೂಲಕ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡಿದರು.
‘ಸರ್ಕಾರಕ್ಕೆ ನಾನು ಔಷಧ ಲೈಸೆನ್ಸ್ ನೀಡಿದ್ದೇನೆ, ಸರ್ಕಾರ ಅದನ್ನು ಗೌಪ್ಯವಾಗಿಟ್ಟುಕೊಂಡಿದೆ ಎಂಬುದು ಸುಳ್ಳು. ಕರೊನಾಕ್ಕೆ ಮದ್ದು ಎಂದಲ್ಲ, ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಎಂದು ಔಷಧ ತಯಾರಿ ಹಾಗೂ ಮಾರಾಟ ಮಾಡಲು ನಿಯಮಾನುಸಾರ ಪರವಾನಗಿ ಇದೆ. ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳ ಸಹಕಾರ ಇಲ್ಲದಿದ್ದರೆ ಈ ಹಂತಕ್ಕೆ ಔಷಧ ಸಫಲತೆ ಕಾಣುತ್ತಿರಲಿಲ್ಲ. ಅಲೋಪಥಿ ಔಷಧ ಕ್ರಮವನ್ನೇ ಸ್ವಾತಂತ್ರ್ಯ ನಂತರ ಸ್ಟ್ಯಾಂಡರ್ಡ್ ಔಷಧವೆಂದು ಬಳಸುತ್ತಿರುವ ಕಾರಣ ಆಯುರ್ವೆದದ ಕುರಿತು ಕೆಲವು ತಪು್ಪ ತಿಳಿವಳಿಕೆಗಳಿವೆ. ಅದರಿಂದಾಗಿ ಪ್ರಕ್ರಿಯೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ. ಇನ್ನೊಂದು ವಾರದಲ್ಲಿ ಸರ್ಕಾರ ಉಚಿತ ಔಷಧವನ್ನು ಪಡೆದು ಪ್ರಾಥಮಿಕ ಸೋಂಕಿತರಿಗೆ ರೋಗನಿರೋಧಕ ವರ್ಧನೆ ಔಷಧವೆಂದು ನೀಡುವ ವಿಶ್ವಾಸವಿದೆ’ ಎಂದರು.
‘ನಂತರದಲ್ಲಿ ಔಷಧ ತಯಾರಿಕೆ ಸೂತ್ರ ಹಾಗೂ ಪರವಾನಗಿಯನ್ನು ಸರ್ಕಾರಕ್ಕೇ ಒಪ್ಪಿಸುತ್ತೇನೆ. ಸರ್ಕಾರವೇ ತಯಾರಿಸುವವರೆಗೆ ಅಥವಾ ಖಾಸಗಿ ಸಂಸ್ಥೆಗಳಿಗೆ ಉತ್ಪಾದನೆಗೆ ನೀಡುವವರೆಗೆ ಮಾತ್ರ ಔಷಧ ತಯಾರಿಸಿ ಮಾರಾಟ ಮಾಡುತ್ತೇನೆ. ಸರ್ಕಾರ ತಯಾರಿಕೆ ಆರಂಭಿಸಿದ ನಂತರ ಸ್ಥಗಿತಗೊಳಿಸುತ್ತೇನೆ. ಪ್ರಾಥಮಿಕ ಸೋಂಕಿತರಿಗೆ, ಪೊಲೀಸ್, ಪತ್ರಕರ್ತರು, ವೈದ್ಯಕೀಯ ಸಿಬ್ಬಂದಿಯಂತಹ ಜನರೊಂದಿಗೆ ನೇರ ಸಂಪರ್ಕ ಹೊಂದಿರುವವರು ಹಾಗೂ ಕೋ ಮಾರ್ಬಿಡ್ ಸ್ಥಿತಿಯುಳ್ಳವರಿಗೆ ಔಷಧ ಮೊದಲು ಸಿಗಲಿ ಎಂಬುದೊಂದೇ ಉದ್ದೇಶ. ಈಗಾಗಲೆ ನಾಲ್ಕು ಎಂಎನ್ಸಿಗಳು ಕೋಟ್ಯಂತರ ರೂ.ಗೆ ಔಷಧದ ಹಕ್ಕನ್ನು ಕೊಳ್ಳಲು ಬಂದಿದ್ದವು. ಆದರೆ ಮೊದಲು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮಾರಾಟ ಮಾಡಿಲ್ಲ’ ಎಂದು ಗಿರಿಧರ ಕಜೆ ತಿಳಿಸಿದರು.
ಸಂಶೋಧಕರಿಗೆ ಗೌರವ ಕೊಡಿ: ಆಯುರ್ವೆದ, ಅಲೋಪಥಿ, ಹೋಮಿಯೋಪಥಿಯಿರಲಿ ಸಂಶೋಧಕರಿಗೆ ಗೌರವ ನೀಡಬೇಕು ಎಂದರು. ಯಾವುದೇ ಸ್ಪಷ್ಟನೆ ಬೇಕಿದ್ದರೆ ನಾನೇ ನೀಡುತ್ತಿದ್ದೆ. ಅದನ್ನು ನೋಟಿಸ್ ರೂಪದಲ್ಲಿ ಹೊರಡಿಸಿ, 17 ದಿನವಾದರೂ ನನಗೆ ತಲುಪಿಸದೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಅವಶ್ಯಕತೆ ಇರಲಿಲ್ಲ. ಕರೊನಾ ಸಂದರ್ಭದಲ್ಲಿ ಯಾವುದೇ ಔಷಧದಿಂದ ಪರಿಹಾರ ಸಿಗುತ್ತದೆ ಎಂದರೂ ಸ್ವಾಗತಿಸುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. 10 ಜನರು ಗುಣಮುಖರಾಗಿದ್ದಾರೆ ಎಂಬುದು ಸಣ್ಣ ವಿಚಾರವಲ್ಲ. ಆಯುರ್ವೆದದ ಜತೆಗೆ ಕ್ಲಿನಿಕಲ್ ಟ್ರಯಲ್ನಲ್ಲಿ ನೀಡಿದ್ದ ಅಲೋಪಥಿ ಔಷಧ ನಿಷ್ಕ್ರಿಯ ಹಾಗೂ ಅಡ್ಡಪರಿಣಾಮ ಹೊಂದಿದೆ ಎಂಬ ಕಾರಣಕ್ಕೆ ಸ್ಥಗಿತಗೊಳಿಸಲಾಗಿದೆ. ಹಾಗಾದರೆ 10 ಸೋಂಕಿತರು ಗುಣಮುಖರಾಗಿದ್ದು ಯಾವುದರಿಂದ ಎಂಬುದನ್ನೂ ತಿಳಿದು ಮಾತನಾಡಬೇಕು ಎಂದರು.
Comments are closed.