ಕರ್ನಾಟಕ

ಆನ್‌ಲೈನ್‌ ಮೂಲಕ ಹಾಪ್‌ಕಾಮ್ಸ್ ನಿಂದ ಮೈಸೂರಿನಲ್ಲಿ ಮನೆ ಮನೆಗೆ ತಲುಪುತ್ತಿದೆ ತಾಜಾ ಹಣ್ಣು-ತರಕಾರಿ

Pinterest LinkedIn Tumblr


ಮೈಸೂರು; ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌, ಆನ್‌ಲೈನ್ ಡೆಟಿಂಗ್, ಆನ್‌ಲೈನ್ ಕೆಲಸ ಎಲ್ಲವು ಸಾಮಾನ್ಯವಾಗಿಬಿಟ್ಟಿದೆ. ಕೊರೋನಾ ಬಂದ ಮೇಲಂತು ಕೊರೋನಾದಿಂದ ಸೇಫ್‌ ಹಾಗೂ ಆರೋಗ್ಯವಾಗಿರಲು ಎಲ್ಲರು ಮನೆಯಲ್ಲೇ ಇದ್ದು ಆನ್‌ಲೈನ್ ಜಗತ್ತು ಮತ್ತಷ್ಟು ಬೃಹದಾಕಾರವಾಗಿ ಬೆಳೆದಿದೆ. ಈ ಆನ್‌ಲೈನ್ ಸಾಲಿಗೆ ಇದೀಗ ಹೊಸದಾಗಿ ಹಾಪ್‌ಕಾಮ್ಸ್‌ ಸಹ ಸೇರಿದ್ದು, ಸರ್ಕಾರದ ಭಾಗವಾದ ಹಾಪ್ಕಾಮ್ಸ್‌ ಇದೀಗ ಹಣ್ಣು ಮತ್ತು ತರಕಾರಿಗಳನ್ನು ನೇರವಾಗಿ ಮನೆಗೆ ತಲುಪಿಸಲಿದೆ. ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿರುವ ಈ ಹಾಪ್‌ಕಾಮ್ಸ್‌ಗೆ ಭರ್ಜರಿ ಪ್ರತಿಕ್ರಿಯೆ ಸಹ ಸಿಕ್ಕಿದೆ.

ಹೌದು, ಕೊರೋನಾ ಭೀತಿ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ದಿನನಿತ್ಯದ ವಸ್ತುಗಳನ್ನು ಕೊಂಡುಕೊಳ್ಳಲು ಮಾರ್ಕೆಟ್‌ಗೆ ಹೋಗೋದು ಅಂದರೆ ಅದು ಕೊರೋನಾವನ್ನು ಮನೆಗೆ ಕರೆದುಕೊಂಡು ಬಂದಂತೆ ಎಂದು ಆತಂಕಕೊಂಡಿದ್ದಾರೆ. ಆದರೂ ಅತ್ಯವ್ಯಶಕವಾಗಿ ಬೇಕಾಗಿರುವ ಹಣ್ಣು ಮತ್ತು ತರಕಾರಿಯನ್ನು ಕೊರೋನಾ ಭಯದಲ್ಲೇ ಖರೀದಿ ಮಾಡಬೇಕಿದೆ. ಸಾರ್ವಜನಿಕರ ಈ ಆತಂಕವನ್ನು ದೂರ ಮಾಡಲು ಮೈಸೂರಿನಲ್ಲಿ ಹಾಪ್​ಕಾಮ್ಸ್​ನಿಂದ ನೂತನ ಯೋಜನೆಗೆ ಚಾಲನೆ ಸಿಕ್ಕಿದೆ. ಆನ್​ಲೈನ್​ನಲ್ಲೇ ಹಣ್ಣು ತರಕಾರಿ ಮಾರಾಟಕ್ಕೆ ಮುಂದಾದ ಹಾಪ್​ಕಾಮ್ಸ್​ ಆನ್​ಲೈನ್​ನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ತರಕಾರಿ ಹಾಗೂ ಹಣ್ಣುಗಳು ಕಳುಹಿಸಲು ಮುಂದಾಗಿದೆ. ಮೈಸೂರಿನಲ್ಲಿ ಆನ್​ಲೈನ್​ ಹಾಪ್​ಕಾಮ್ಸ್​ಗೆ ಚಾಲನೆ ನೀಡಲಾಗಿದ್ದು, ಪ್ರಾಯೋಗಿಕವಾಗಿ ಆರಂಭವಾಗಿರುವ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಸಾಮಾನ್ಯ ಮೊಬೈಲ್‌ ಆ್ಯಪ್‌ನಂತೆ ಗೂಗಲ್ ಪ್ಲೇ ಸ್ಟೋರ್​​ನಲ್ಲಿ HOPCOMS online ಆ್ಯಪ್ ಸಿಗಲಿದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಮೊದಲು ಚಂದಾರಾರರಾಗಬೇಕು. ಆ ನಂತರ ಆ್ಯಪ್‌ನಲ್ಲಿ ಕಾಣುವ ಹಣ್ಣು ಹಾಗೂ ತರಕಾರಿಯನ್ನು ಅಗತ್ಯಕ್ಕೆ ತಕ್ಕಂತೆ ಖರೀದಿಸಬಹುದಾಗಿದೆ. ಅದಕ್ಕೆ ಆನ್‌ಲೈನ್‌ನಲ್ಲೇ ಪೇಮೆಂಟ್ ಸಹ ಮಾಡಬಹುದು. ಹಾಪ್​ಕಾಮ್ಸ್​ನಿಂದ ಕನಿಷ್ಠ ಖರೀದಿ ದರ 200 ರೂ. ನಿಗಧಿ ಮಾಡಲಾಗಿದೆ. ಮೊದಲು 500 ರೂ. ಕನಿಷ್ಠ ದರ ನಿಗಧಿ ಮಾಡಲಾಗಿತ್ತು. ಜನರ ಅನುಕೂಲಕ್ಕಾಗಿ 200 ರೂ. ಖರೀದಿಸಿದರೆ ಹಣ್ಣು ತರಕಾರಿ ಮಾರುಕಟ್ಟೆ ದರದಲ್ಲೇ ನಿಮ್ಮ ಮನೆಗಳಿಗೆ ವಿತರಣೆಯಾಗಲಿದೆ.

ತೋಟಗಾರಿಕೆ ಇಲಾಖೆ, ಹಾಪ್ಕಾಮ್ಸ್ ವತಿಯಿಂದ ನೂತನ ಯೋಜನೆ ಜಾರಿ ಮಾಡಿದ್ದು, ಮೈಸೂರಿನಲ್ಲೇ ಈಗಾಗಲೇ 1 ಸಾವಿರಕ್ಕೂ ಹೆಚ್ಚು ಗ್ರಾಹಕರು ನೋಂದಣಿಯಾಗಿದ್ದಾರೆ. ರೈತರಿಗೂ ಸೂಕ್ತಬೆಲೆ ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ತರಕಾರಿ ಹಣ್ಣು ಮಾರಾಟ ಮಾಡುವ ಉದ್ದೇಶದಿಂದ ಈ ಯೋಜನೆ ತಂದಿದ್ದು, ಆನ್‌ಲೈನ್‌ ಜಗತ್ತಿಗೆ ಹಾಪ್‌ಕಾಮ್ಸ್ ಲಗ್ಗೆ ಇಟ್ಟಿದ್ದು ಖಾಸಗಿಯವರ ಜೊತೆ ಸ್ಪರ್ಧೆಗೆ ಇಳಿದಿದೆ. ಅದೇನೆ ಇದ್ದರೂ ಕೊರೋನಾ ಭಯದಿಂದ ಮಾರ್ಕೆಟ್‌ಗೆ ಹೋಗಲು ಹೆದರುವವರಿಗೆ ಹಾಪ್‌ಕಾಮ್ಸ್‌ನ ಈ ಆ್ಯಪ್‌ ಆಪತ್ಬಾಂದವನಾಗಿದೆ.

Comments are closed.