ಕರ್ನಾಟಕ

ಕೊರೋನಾ ಭಯದ ಮಧ್ಯೆಯೇ ರಾಜ್ಯಾದ್ಯಂತ ಗುಡುಗು ಸಹಿತ ಭಾರೀ ಮಳೆ

Pinterest LinkedIn Tumblr


ಬೆಂಗಳೂರು(ಆ.01): ತೀವ್ರ ಕೋವಿಡ್​​-19 ಆತಂಕದ ನಡುವೆಯೂ ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಈ ಮಳೆಯಿಂದ ಕೊರೋನಾ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದಲೇ ಜನ ಭಾರೀ ಆತಂಕದ ಮಧ್ಯೆ ಕಾಲ ಕಳೆಯುವಂತಾಗಿದೆ. ಶಿವಮೊಗ್ಗ, ಮಂಗಳೂರು, ಬೆಂಗಳೂರು, ಚಿಕ್ಕಮಗಳೂರು, ಕೋಲಾರ, ಮೈಸೂರು ಸೇರಿದಂತೆ ಹಲವೆಡೆ ಜೋರು ಮಳೆ ಸುರಿಯುತ್ತಿದೆ.

ಇನ್ನು, ಬೆಂಗಳೂರು ಹೊರವಲಯ ನೆಲಮಂಗಲ ನಗರ ಸೇರಿದಂತೆ ಸುಂಕದಕಟ್ಟೆ, ಬ್ಯಾಡರಹಳ್ಳಿ, ನಾಗರಬಾವಿ, ಬನಶಂಕರಿ, ಜಯನಗರ, ಮಲ್ಲೇಶ್ವರಂ, ಮೆಜೆಸ್ಟಿಕ್​​, ಕೆ.ಆರ್​ ಮಾರ್ಕೆಟ್​, ಕೆ.ಆರ್​​ ಪುರಂ, ಟೌನ್​​ಹಾಲ್​​ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಗುಡುಗು ಸಹಿತ ರಭಸವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರದಾಡುವಂತಾಗಿದೆ.

ಇನ್ನು, ಆಗಸ್ಟ್ ಮತ್ತು ಸೆಪ್ಟೆಂಬರ್​​ನಲ್ಲಿ ದೇಶಾದ್ಯಂತ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಮಳೆಗಾಲದ ನಾಲ್ಕು ತಿಂಗಳ ದ್ವಿತೀಯಾರ್ಧದಲ್ಲಿ ದೀರ್ಘಕಾಲೀನ ಸರಾಸರಿಯ ಶೇ.97ರಷ್ಟು ಮಳೆಯಾಗುವ ಸಂಭವವಿದೆ ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ರಾಜ್ಯದ ಬೆಳಗಾವಿ, ಹಾವೇರಿ, ಕಲಬುರ್ಗಿ , ಬೀದರ್​​ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಆಗಸ್ಟ್ 2ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮಳೆಯಲ್ಲಿ ಕೊರೊನಾ ವೈರಸ್ ವ್ಯಾಪಕತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದು ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಳೆಯಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆಗಳಿರುವ ಕಾರಣ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಈ ಹಿಂದೆಯೇ ಭೂಗರ್ಭ ತಜ್ಞರು ಹೇಳಿದ್ದರು.

Comments are closed.