
ಬೀದರ್; ಕೊರೋನಾ ಸೋಂಕು ಭಾರತಕ್ಕೆ ಕಾಲಿಟ್ಟಾಗಿನಿಂದ ಅದರ ಬಗ್ಗೆ ಸಮಾಜದಲ್ಲಿ ಬಹಳಷ್ಟು ತಪ್ಪು ತಿಳಿವಳಿಕೆ ಬೇರೂರಿದೆ. ಸೋಂಕು ಅಂಟಿದರೆ ಭಯ ಪಡುವುದಾಗಲಿ, ಮುಜುಗರಕ್ಕೊಳಗಾಗುವುದರಲ್ಲಿ ಅರ್ಥವಿಲ್ಲ. ಸೂಕ್ತ ಉಪಚಾರ, ವೈದ್ಯರ ಸಲಹೆ ಜೊತೆಗೆ ಆತ್ಮಸ್ಥೈರ್ಯವೇ ಕೊರೊನಾ ವಿರುದ್ಧ ಹೋರಾಡಲು ಬೇಕಾದ ಪ್ರಮುಖ ಮದ್ದು. ಅದಕ್ಕೆ ನಿದರ್ಶನ ಬೀದರ್ ನಗರದ ಗೋವಿಂದ ಕಾಲೋನಿಯ ಶಿವಪುತ್ರ ವೈದ್ಯ ಕುಟುಂಬ.
ಈ ಕುಟುಂಬದ 11 ಜನರಿಗೆ ಒಮ್ಮೆಲೆ ಕೋವಿಡ್ ಸೋಂಕು ಅಂಟಿತ್ತು. ಅದೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೆ. ಸೋಂಕು ದೃಢಪಡುತ್ತಲೇ ಇವರೆಲ್ಲರೂ ಹೋಮ್ ಐಸೋಲೆಷನ್ನಲ್ಲಿ ಚಿಕಿತ್ಸೆ ಪಡೆದುಕೊಂಡು, ಐದೇ ದಿನದಲ್ಲಿ ಎಲ್ಲರೂ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಕುಟುಂಬದ ವೀರಪ್ಪ ವೈದ್ಯ ವಯೋಸಹಜ ಖಾಯಿಲೆಯಿಂದ ಜುಲೈ 10ರಂದು ಮೃತ್ತಪಟ್ಟಿದ್ದರು. ಇವರು ಮೃತಪಟ್ಟ ನಂತರ ಕೋವಿಡ್ ಟೆಸ್ಟ್ ಮಾಡಿಸಿದಾಗ ಇವರ ವರದಿ ನೆಗೆಟಿವ್ ಬಂದಿತ್ತು. ಆದರೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಸೂಚನೆ ಮೇರೆಗೆ ಈ ಕುಟುಂಬದ 20 ಜನರು ಕೋವಿಡ್ ಟೆಸ್ಟ್ ಮಾಡಿಸಿದಾಗ 11 ಜನರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿತ್ತು. ಇದರಲ್ಲಿ ಮಕ್ಕಳಿಂದ ಹಿಡಿದು ವೃದ್ಧರೂ ಸಹ ಸೋಂಕಿಗೆ ತುತ್ತಾಗಿದ್ದರು.
ವೈದ್ಯ ಕುಟುಂಬದ 12 ವರ್ಷದ ಬಾಲಕನಿಂದ ಹಿಡಿದು 79 ವರ್ಷದ ವೃದ್ಧೆಗೂ ಸಹ ಕೊರೋನಾ ಸೋಂಕು ಅಂಟಿತ್ತು. ಆದರೆ, ಇದರಿಂದ ಈ ಕುಟುಂಬದವರು ಧೃತಿಗೆಡದೆ ಕೊರೋನಾ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. 16 ವರ್ಷದ ಇಬ್ಬರು ಬಾಲಕರು, 17 ವರ್ಷದ ಬಾಲಕಿ, 35, 38, 50 ವರ್ಷದವರ ಜೊತೆಗೆ 79 ವರ್ಷದ ವೃದ್ಧೆ, 18, 50 ವರ್ಷದ ಪುರುಷರಿಗೆ ಸೋಂಕು ತಗುಲಿತ್ತು. ಈ 11 ಜನರಲ್ಲಿ ಯಾರಿಗೂ ಕೂಡಾ ಕೊರೋನಾ ರೋಗದ ಯಾವುದೇ ಲಕ್ಷಣಗಳಿರಲಿಲ್ಲ. ಎಲ್ಲರೂ ಅಸಿಂಪ್ಟಾಮೆಟಿಕ್ ಇದ್ದುದ್ದಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಹಕಾರದ ಮೇರೆಗೆ ಮೂವರು ಮಕ್ಕಳು ಸೇರಿದಂತೆ ಎಲ್ಲಾ 11 ಜನರು ಸಹ ಮನೆಯಲ್ಲಿಯೇ ಉಳಿದು ವೈದ್ಯರ ಸಲಹೆ ಮೇರೆಗೆ ಆಯುರ್ವೇದ ಪದ್ಧತಿಯಂತೆ ಉಪಚಾರ ಪಡೆದಿದ್ದಾರೆ.
ಅಲೋಪಥಿಕ್ ಮಾತ್ರೆಯ ಜೊತೆಯಲ್ಲಿ ಆಯುರ್ವೇದದಂತೆ ಕಷಾಯ, ನಿತ್ಯ ಬಿಸಿ ನೀರು ಸೇವನೆ, ಬಿಸಿ ಬಿಸಿಯಾಗಿರುವಾಗಲೇ ಊಟ ಸೇವನೆ ಇತ್ಯಾದಿ ಸಹಜ ಚಿಕಿತ್ಸೆ ಪಡೆದಿದ್ದಾರೆ. ಜುಲೈ 20ರಂದು ಕೊರೋನಾ ಪಾಸಿಟಿವ್ ಬಂದಿದ್ದ ಇವರ ವರದಿ, ಎರಡನೇ ಬಾರಿ ಪರೀಕ್ಷೆ ನಡೆಸಿದಾಗ ಐದೇ ದಿನದಲ್ಲಿ ಅಂದರೆ ಜುಲೈ 25ರಂದು ಟೆಸ್ಟ್ ಮಾಡಿಸಿದ ವರದಿ ನೆಗೆಟಿವ್ ಬಂದಿದೆ. ಕೊರೋನಾ ಬಂದರೆ ಹೆದರುವ ಅಗತ್ಯವಿಲ್ಲ. ಧೈರ್ಯವೊಂದೇ ಕೊರೋನಾ ಹಿಮ್ಮೆಟ್ಟಿಸಲು ಇರುವ ಮದ್ದು ಮತ್ತು ಅಸ್ತ್ರ ಎನ್ನುತ್ತಾರೆ ವೈದ್ಯ ಕುಟುಂಬದವರು.
Comments are closed.