ಮನೋರಂಜನೆ

ಆತ್ಮಹತ್ಯೆಗೆ ಹಿಂದಿನ ರಾತ್ರಿ ತಮ್ಮ ಕಂಪನಿ ಸಿಬ್ಬಂದಿ ಜೊತೆ ಮಾತನಾಡಿದ್ದ ಬಾಲಿವುಡ್ ನಟ ಸುಶಾಂತ್​ ಸಿಂಗ್​

Pinterest LinkedIn Tumblr


ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಕಾಲೇಜ್​ ಡ್ರಾಪ್​ಔಟ್​ ಆಗಿದ್ದರೂ ಅನೇಕ ವಿಷಯಗಳ ಬಗ್ಗೆ ಆಸಕ್ತಿ ಹೊಂದಿದ್ದರು. ತಾವು ಕಣ್ಮುಚ್ಚುವುದರೊಳಗೆ ಪೂರೈಸಿಕೊಳ್ಳಬೇಕೆಂದಿರುವ 150 ಕನಸುಗಳ ಬಗ್ಗೆ ಅನೇಕರೊಂದಿಗೆ ಚರ್ಚಿಸಿದ್ದರು. ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಅವರು ವಿವಿಡ್​ರೇಜ್​ ರಿಯಾಲಿಟಿ ಎಕ್ಸ್​ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು. ಈ ಸಂಸ್ಥೆಯ ಮೂಲಕ ಅವರು ವರ್ಚುಯಲ್​ ರಿಯಾಲಿಟಿ ಕಂಟೆಂಟ್​ (ವಿಆರ್​) ಅನ್ನು ಅಭಿವೃದ್ಧಿಪಡಿಸುತ್ತಿದ್ದರು.

ಈ ಕಂಪನಿಗೆ ಕ್ರಿಯೇಟಿವ್​ ಕಂಟೆಂಟ್​ ಮ್ಯಾನೇಜರ್​ ಆಗಿ ಸಿದ್ಧಾರ್ಥ ಪಿಥಾನಿ ಎಂಬುವರನ್ನು ಸುಶಾಂತ್​ ನೇಮಿಸಿಕೊಂಡಿದ್ದರು. ಅಷ್ಟೇ ಅಲ್ಲ, ಭವಿಷ್ಯದಲ್ಲಿ ತಾವು ಆರಂಭಿಸಲಿರುವ ಹಲವು ಯೋಜನೆಗಳ ಅನುಷ್ಠಾನದ ಜವಾಬ್ದಾರಿಯನ್ನೂ ಸುಶಾಂತ್​ ಅವರು ಸಿದ್ಧಾರ್ಥ್​ ಮೇಲೆ ಹಾಕಿದ್ದರು ಎನ್ನಲಾಗಿದೆ.
ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ರಾತ್ರಿ ಸುಶಾಂತ್​ ಅವರು ತಮ್ಮನ್ನು ಭೇಟಿಯಾಗಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದಾಗಿ ಸಿದ್ಧಾರ್ಥ್​ ಪಿಥಾನಿ ತಿಳಿಸಿದ್ದಾರೆ.

ಸುಶಾಂತ್​ ಅವರು ನನ್ನನ್ನು ಬುದ್ಧ ಎಂದೇ ಕರೆಯುತ್ತಿದ್ದರು. ತಮ್ಮ 150 ಕನಸುಗಳನ್ನು ಪೂರೈಸಿಕೊಳ್ಳುವ ಉದ್ದೇಶಕ್ಕಾಗಿಯೇ ಅವರು ನನ್ನನ್ನು ನೇಮಿಸಿಕೊಂಡಿದ್ದರು. ಕಾಮನ್​ ಫ್ರೆಂಡ್​ ಮೂಲಕ ನಮ್ಮಿಬ್ಬರಿಗೂ ಪರಿಚಯವಾಗಿತ್ತು. ನಾವಿಬ್ಬರೂ ಒಟ್ಟಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೆವು. ಅವರಿಗಾಗಿ ನಾನು ಗಿಟಾರ್​ ನುಡಿಸುತ್ತಿದ್ದೆ. ನನಗೆ ಆಧ್ಮಾತ್ಮದಲ್ಲಿ ನಂಬಿಕೆ ಮೂಡಿಸಿದವರೇ ಅವರು. ಅವರು ನೇಣಿನ ಕುಣಿಕೆಗೆ ಕತ್ತನ್ನು ಕೊಡುವ ಹಿಂದಿನ ರಾತ್ರಿ 1 ಗಂಟೆಗೆ ಅವರು ನನ್ನನ್ನು ಭೇಟಿಯಾಗಿದ್ದರು. ನನ್ನ ಕೋಣೆಗೆ ಬಂದಿದ್ದ ಅವರು, ಅಷ್ಟು ಹೊತ್ತಾದರೂ ಎದ್ದಿರುವುದು ಏಕೆ ಎಂದು ಪ್ರಶ್ನಿಸಿದ್ದರು. ಸಾಕಷ್ಟು ವಿಷಯಗಳನ್ನು ಚರ್ಚಿಸಿದ ಬಳಿಕ ನಾನು ಅವರು ಅವರ ಕೋಣೆಯವರೆಗೆ ಹೋಗಿ ಬಿಟ್ಟುಬಂದಿದ್ದೆ ಎಂದು ಸ್ಮರಿಸಿಕೊಂಡಿದ್ದಾರೆ.

ಮರುದಿನ ಬೆಳಗ್ಗೆ ನಾನು ನನ್ನ ಕೋಣೆಯಿಂದ ಹೊರಬಂದಾಗ ಬಾಣಸಿಗರು ಸುಶಾಂತ್​ ಅವರ ಕೋಣೆ ಲಾಕ್​ ಆಗಿರುವುದಾಗಿ ತಿಳಿಸಿದರು. ದೀಪೇಶ್​ ಮತ್ತು ಕೇಶವ್​ ಅಲ್ಲದೆ, ಇತರೆ ಫ್ಲ್ಯಾಟ್​ಮೇಟ್​ಗಳು ಬೆಳಗ್ಗೆ ಸುಶಾಂತ್​ ಅವರನ್ನು ಕಂಡಿದ್ದರು. ಆದರೂ ಕೋಣೆಗೆ ಬೀಗಹಾಕಿಕೊಂಡಿರುವುದು ಸ್ವಲ್ಪ ವಿಚಿತ್ರ ಎನಿಸಿದರೂ ಸುಮ್ಮನಿದ್ದೆವು. ಬಳಿಕ ಕೋಣೆಯ ಬಾಗಿಲನ್ನು ಒಡೆದು ನೋಡಿದಾಗ ನೇಣಿನ ಕುಣಿಕೆಯಲ್ಲಿ ಅವರ ದೇಹ ತೂಗಾಡುತ್ತಿದ್ದದ್ದು ಕಂಡಿತು. ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ನಾವು ಯಾರೂ ಕನಸಿನಲ್ಲೂ ಊಹಿಸಿರಲಿಲ್ಲ. ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂಬುದು ಗೊತ್ತಿತ್ತು. ಆದರೆ, ಹೀಗೆ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ.

ರಿಯಾ ಚಕ್ರವರ್ತಿ ಅವರು ಸುಶಾಂತ್​ ಅವರಿಂದ ದೂರವಾದ ದಿನದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಜೂ.8ರಂದು ರಿಯಾ ಅವರು ಸುಶಾಂತ್​ ಅವರ ಫ್ಲ್ಯಾಟ್​ನಿಂದ ತೆರಳಿದ್ದರು. ಹೋಗುವಾಗ ಸುಶಾಂತ್​ನನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದರು. ತಮಗೆ ಹುಷಾರಿಲ್ಲದ ಕಾರಣ ತಮ್ಮ ಮನೆಗೆ ಹೋಗುತ್ತಿರುವುದಾಗಿ ಅವರು ಹೇಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಯಾವುದೇ ಸಂಬಂಧವಾಗಿದ್ದರೂ ಅದರಲ್ಲಿ ಏಳುಬೀಳುಗಳು ಸಹಜ. ರಿಯಾ ಅವರೊಂದಿಗೆ ಸಂಬಂಧ ಹೊಂದಿರುವ ವಿಷಯವಾಗಿ ನಾನೆಂದೂ ಸುಶಾಂತ್​ ಅವರನ್ನು ಪ್ರಶ್ನಿಸಿರಲಿಲ್ಲ. ಅವರ ವೈಯಕ್ತಿಕ ವಿಚಾರಗಳಿಗೆ ತಲೆಹಾಕುವುದು ಸಭ್ಯತೆ ಅಲ್ಲ ಎಂಬುದು ನನ್ನ ಭಾವನೆಯಾಗಿತ್ತು. ಇವರಿಬ್ಬರ ಸಂಬಂಧದಲ್ಲೂ ಸಾಕಷ್ಟು ಏಳುಬೀಳುಗಳು ಇದ್ದದ್ದನ್ನು ಗಮನಿಸಿದ್ದೆ. ಆದರೆ ಈ ಬಾರಿ ಅವರಿಬ್ಬರೂ ದೂರಾಗುವಂಥದ್ದು ಏನಾಯಿತು ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ನಾನು ಸುಶಾಂತ್​ ಅವರ ಕುಟುಂಬದವರ ಸಂಪರ್ಕ ಹೊಂದಿದ್ದೆ. ಆದರೆ, ಸ್ವತಃ ಅವರೇ ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡದಂತೆ ನನಗೆ ಹೇಳಿದ್ದರು. ಅಂದಿನಿಂದ ನಾನು ಸಂಬಂಧವನ್ನು ಕಡಿದುಕೊಳ್ಳಲು ಯತ್ನಿಸಿದ್ದೆ. ನನಗೆ ಸುಳ್ಳು ಹೇಳುವಂತೆ ಒತ್ತಡ ಹೇರಿದ್ದರಿಂದ, ಸ್ವತಃ ನಾನೇ ಮುಂಬೈ ಪೊಲೀಸರಿಗೆ ಲಿಖಿತವಾಗಿ ನಡೆದ ವಿಷಯವನ್ನೆಲ್ಲಾ ವಿವರಿಸಿದೆ ಎಂದು ತಿಳಿಸಿದ್ದಾರೆ.

Comments are closed.