ಬೆಂಗಳೂರು: ಯಾವುದೇ ಕಾರಣಕ್ಕೂ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀರಾಕರಿಸುವತಿಲ್ಲ. ಒಂದು ವೇಳೆ ಆದೇಶ ಮೀರಿ ನಡೆದುಕೊಂಡರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು, ‘ಕೋವಿಡ್ ಟೆಸ್ಟ್ ವರದಿ ಇಲ್ಲವೆಂದು ಯಾವುದೇ ಖಾಸಗಿ ಆಸ್ಪತ್ರೆಯೂ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ. ಕೊರೊನಾ ಲಕ್ಷಣವಿರಲಿ ಅಥವಾ ಬೇರೆ ಯಾವುದೇ ಖಾಯಿಲೆ ಇರಲಿ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದ್ದೂ ದಾಖಲಾತಿ ನಿರಾಕರಿಸಿದರೆ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಅಂತೆಯೇ ‘ನಟಿ ಸುಧಾರಾಣಿ ಅವರ ಅಣ್ಣನ ಪುತ್ರಿಯ ಅರೋಗ್ಯ ಸಮಸ್ಯೆಯಿಂದ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಬಂದರೂ ಚಿಕಿತ್ಸೆಗೆ ತಡಮಾಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ನೋಡಿದೆ. ಅವರಷ್ಟೇ ಅಲ್ಲ ಸಾಮಾನ್ಯ ವ್ಯಕ್ತಿ ಯಾರೇ ಆಗಲಿ ಚಿಕಿತ್ಸೆ ಸಿಗದೇ ಪರದಾಡಬಾರದು. ಆ ಖಾಸಗಿ ಆಸ್ಪತ್ರೆಯ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರು, ‘ರಾಜ್ಯದ ಯಾವುದೇ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೋವಿಡ್ ಸೋಂಕು ಅಥವಾ ಕೋವಿಡ್ ಸೋಂಕಿನಂತಹ ರೋಗ ಲಕ್ಷಣಗಳುಳ್ಳ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.
Comments are closed.