ಮಂಡ್ಯ: ಕೆ.ಆರ್. ಪೇಟೆ ಪಟ್ಟಣದ ಪ್ರಸಿದ್ದ ದುರ್ಗಾಭವನ್ ವೃತ್ತದ ವಾತ್ಸಲ್ಯ ಕ್ಲಿನಿಕ್ ವೈದ್ಯರಾದ ಡಾ. ಎ.ಎಸ್. ಪ್ರಕಾಶ್ ಅವರು ಕೊರೋನಾ ಸೋಂಕಿನಿಂದಾಗಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ತಾಲ್ಲೂಕು ಆಡಳಿತವು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕುಟುಂಬದ ಮನವಿಯ ಮೇರೆಗೆ ಮೈಸೂರಿನ ಜೆ.ಎಸ್.ಎಸ್. ಕೋವಿದ್-೧೯ ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೆ.ಆರ್.ಪೇಟೆ ತಾಲ್ಲೂಕು ಬೂಕನಕೆರೆ ಹೋಬಳಿಯ ಪೇಟೆ ಅರಳಕುಪ್ಪೆ ಗ್ರಾಮದವರಾದ ಡಾ.ಎ.ಎಸ್.ಪ್ರಕಾಶ್ ಅವರು ಸುಮಾರು 30 ವರ್ಷಕ್ಕೂ ಹೆಚ್ಚು ವರ್ಷಗಳಿಂದ ಕೆ.ಆರ್.ಪೇಟೆ ಪಟ್ಟಣದಲ್ಲಿ ವಾತ್ಸಲ್ಯ ಚಿಕಿತ್ಸಾಲಯ ತೆರೆದು ವೈದ್ಯವೃತ್ತಿ ನಡೆಸುತ್ತಿದ್ದರು. ಕಡಿಮೆ ದರದಲ್ಲಿ ಗ್ರಾಮೀಣ ಜನರಿಗೆ ಚಿಕಿತ್ಸೆ ನೀಡುವ ಮೂಲಕ ಬಡ ಜನರ ಪ್ರೀತಿ ಪಾತ್ರ ವೈದ್ಯರಾಗಿದ್ದರು. ಯಾರಾದರೂ ರೋಗಿ ತಮ್ಮಲ್ಲಿಗೆ ಬಂದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಬೇಕಾದ ಸಂದರ್ಭದಲ್ಲಿ ವೈದ್ಯರು ತಮ್ಮ ಸ್ವಂತ ಜೇಬಿನ ಹಣ ನೀಡಿ ಕಳುಹಿಸುತ್ತಿದ್ದರು. ಹುಷಾರಾದ ಮೇಲೆ ಸಾಧ್ಯವಾದರೆ ಹಣ ತಂದು ಕೊಡಿ ಎಂದು ಹೇಳಿ ಕಳುಹಿಸುತ್ತಿದ್ದರು.
ಇಂತಹ ಅತ್ಯುತ್ತಮ ಗುಣ ಹೊಂದಿದ್ದ ಡಾ.ಪ್ರಕಾಶ್ ಅವರ ನಿಧನದಿಂದ ತಾಲ್ಲೂಕಿನ ಜನತೆಗೆ ತುಂಬಲಾರದ ನಷ್ಟವಾಗಿದೆ ಎಂದು ವಕೀಲರಾದ ಹೊನ್ನೇನಹಳ್ಳಿ ಹೆಚ್. ರವಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಕೃಷ್ಣೇಗೌಡ ಅವರು ಅಭಿಪ್ರಾಯ ವ್ಯಕ್ತ ವ್ಯಕ್ತಪಡಿಸಿ ಮೃತರ ವೈದ್ಯರ ನಿಧನಕ್ಕೆ ಕಂಬನಿ ಮಿಡಿದ್ದಾರೆ.
ಮೃತರ ನಿಧನಕ್ಕೆ ತಾಲ್ಲೂಕು ಭಾರತೀಯ ವೈದ್ಯರ ಸಂಘದ ಡಾ.ಅರವಿಂದ್, ಡಾ.ಬಿ.ಇ.ದಿನೇಶ್, ಡಾ.ದಿವಾಕರ್, ಡಾ.ಗುಪ್ತಾ, ಡಾ.ರಾಜೇಶ್ವರಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.
ತಹಸೀಲ್ದಾರ್ ಮನವಿ: ಡಾ.ಪ್ರಕಾಶ್ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದ ಸಾರ್ವಜನಿಕರು ಸ್ವಯಂಪ್ರೇರಿತ ರಾಗಿ ಕೋವಿಡ್ ೧೯ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಹಸೀಲ್ದಾರ್ ಎಂ.ಶಿವಮೂರ್ತಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Comments are closed.