ಕರ್ನಾಟಕ

1ರಿಂದ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಶಿಕ್ಷಣ ಇಲಾಖೆಯ ಎರಡು ಚಾನೆಲ್​​ಗಳ ಮೂಲಕ ಧ್ವನಿಮುದ್ರಿತ ಪಾಠ: ಸುರೇಶ್ ಕುಮಾರ್

Pinterest LinkedIn Tumblr


ಚಾಮರಾಜನಗರ(ಜು. 25): 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಧ್ವನಿಮುದ್ರಿತ ಪಾಠಗಳು ಸಿದ್ದವಿದ್ದು, ಶಿಕ್ಷಣ ಇಲಾಖೆಯ ಎರಡು ಚಾನೆಲ್​ಗಳ ಮೂಲಕ ಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣಕ್ಕೋಸ್ಕರವೇ ಇಲಾಖೆಯಲ್ಲಿ ಎರಡು ಚಾನೆಲ್​ಗಳಿವೆ, ರೆಗ್ಯುಲರ್ ಶಿಕ್ಷಣಕ್ಕೆ ಪೂರಕವಾಗಿ ಧ್ವನಿಮುದ್ರಿತ ಪಾಠಗಳನ್ನ ಈ ಚಾನೆಲ್ ಗಳ ಮೂಲಕ ಪ್ರಸಾರ ಮಾಡಲು ಕೇಬಲ್ ಆಪರೇಟರ್​​ಗಳೊಂದಿಗೆ ಮಾತುಕತೆ ನಡೆಸಲಾಗುವುದು. ಈ ಚಾನೆಲ್ ಗಳ ಪ್ರಸಾರಕ್ಕೆ ಕೇಬಲ್ ಆಪರೇಟರ್ ಗಳಿಗೆ ಹಣ ಪಾವತಿಸಲಾಗುವುದು ಎಂದು ತಿಳಿಸಿದರು.

ಈಗಾಗಲೇ ಚಂದನ ವಾಹಿನಿ ಮೂಲಕ 8 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸೇತುಬಂಧ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದಕ್ಕಾಗಿ ಚಂದನ ವಾಹಿನ ನಾಲ್ಕು ಗಂಟೆ ಮೀಸಲಿಟ್ಟಿದೆ ಎಂದು ಹೇಳಿದರು.

ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಶಿಕ್ಷಕಮಿತ್ರ ಎಂಬ ಹೊಸ ಆ್ಯಪ್ ಸಿದ್ದಪಡಿಸಲಾಗುತ್ತಿದೆ. ಶಿಕ್ಷಕರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಬಿಇಓ ಅಥವಾ ಡಿಡಿಪಿಐ ಕಚೇರಿಗಳಿಗೆ ಅಲೆಯಬೇಕಿಲ್ಲ, ಈ ಆ್ಯಪ್ ಮೂಲಕವೇ ಅವರ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.

ಇನ್ನೂ ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನನ್ನ ಶಾಲೆ ನನ್ನ ಕೊಡುಗೆ ಎಂಬ ಆ್ಯಪ್ ರೂಪಿಸಲಾಗುತ್ತಿದ್ದು ಶಾಲೆಗಳಲ್ಲಿ ವ್ಯಾಸಂಗ ಮಾಡಿದವರು ತಮ್ಮ ಶಾಲೆಯ ಅಭಿವೃದ್ಧಿಗೆ ಸಹಾಯ ಹಸ್ತ ಚಾಚಲು ಅನುಕೂಲವಾಗುವಂತೆ ಈ ಮೊಬೈಲ್ ಆ್ಯಪ್ ಸಿದ್ದಪಡಿಸಲಾಗುತ್ತಿದೆ ಎಂದರು.

ಸಿದ್ದರಾಮಯ್ಯಗೆ ಒಳ್ಳೆಯ ಸಂಗತಿಗಳು ಕಾಣವುದೇ ಇಲ್ಲ: ಸುರೇಶ್ ಕುಮಾರ್ ತಿರುಗೇಟುಕೆಲವರಿಗೆ ದಿನಾ ಬೆಳಿಗ್ಗೆ ಎದ್ದ ತಕ್ಷಣ ಹಗರಣಗಳೇ ಕಾಣುತ್ತವೆ, ಅವರಿಗೆ ಸೂರ್ಯ ಉದಯವಾಗುವುದು ಕಾಣವುದಿಲ್ಲ, ಒಳ್ಳೇ ಸಂಗತಿಗಳು ಕಾಣುವುದಿಲ್ಲ, ಕೇಳುವುದಿಲ್ಲ, ಒಳ್ಳೇ ಸಂಗತಿಗಳ ಬಗ್ಗೆ ಮಾತನಾಡುವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಾಗ್ದಾಳಿ ನಡೆಸಿದರು.

ಕೊರೋನಾ ಚಿಕಿತ್ಸೆ ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಿದ್ದರಾಮಯ್ಯ ಮಾಡಿರುವ ಆರೋಪಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನಲ್ಲಿ ಹೊಸ ಅಧ್ಯಕ್ಷರು ನೇಮಕವಾದ ನಂತರ ಪ್ರತಿಪಕ್ಷದ ನಾಯಕ ಹಾಗು ಅವರ ನಡುವೆ ಕಾಂಪಿಟೇಷನ್ ಶುರುವಾಗಿದೆ. ನಾವೇ ಸ್ಟ್ರಾಂಗು ಎಂದು ತೋರಿಸಿಕೊಳ್ಳಲು ಸರ್ಕಾರದ ವಿರುದ್ದ ಆರೋಪ ಮಾಡುತ್ತಿದ್ದಾರೆ. ಯಾರು ಜಾಸ್ತಿ ಬೈಯುತ್ತಾರೋ ಅವರೇ ಸ್ಟ್ರಾಂಗು ಅಂದುಕೊಂಡಿದ್ದಾರೆ, ಸರ್ಕಾರ ಉಪಕರಣಗಳನ್ನು ಖರೀದಿ ಮಾಡಿರುವುದೇ 400 ರಿಂದ 480 ಕೋಟಿ ರೂಪಾಯಿಗೆ ನಾಲ್ಕು ಸಾವಿರ ಕೋಟಿ ಅವ್ಯವಹಾರ ಹೇಗಾಗುತ್ತದೆ ಅವರಿಗೆ ಲೆಕ್ಕ ಕಲಿಸಿದ್ಯಾರು ಎಂದು ಹರಿಹಾಯ್ದರು

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಾಳೆ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಡಿ ಹೊಗಳಿದರು.

ನಮ್ಮ ಸರ್ಕಾರ ಮೊದಲ ಆರು ತಿಂಗಳು ಮಳೆ, ಪ್ರವಾಹದಂತಹ ವಿಪತ್ತು ಎದುರಿಸುವುದರಲ್ಲೇ ಕಳೆದಿದೆ. ಯಡಿಯೂರಪ್ಪ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಇಡೀ ರಾಜ್ಯ ಪ್ರವಾಸ ಮಾಡಿ ವಿಪತ್ತು ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ನಂತರ ಕೊರೋನಾ ಸಂಕಷ್ಟ ಎದುರಾಯ್ತು, ಯಡಿಯೂರಪ್ಪ ಯುವಕರನ್ನು ನಾಚಿಸುವಂತೆ ಓಡಾಟ ನಡೆಸಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದರು.

ರಾಜ್ಯದ ಜನತೆ ಯಡಿಯೂರಪ್ಪ ತೋರಿಸಿದ ಧೈರ್ಯ ಹಾಗೂ ಛಲವನ್ನು ಮೆಚ್ಚಿದ್ದಾರೆ, ಯಡಿಯೂರಪ್ಪ ನವರ ಜೊತೆ ಕೆಲಸಮಾಡುತ್ತಿರುವುದು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಸುರೇಶ್ ಕುಮಾರ್ ಹೇಳಿದರು.

Comments are closed.