ಕರ್ನಾಟಕ

ಇದುವರೆಗೆ ಬೆಂಗಳೂರಿನಲ್ಲಿ 720 ಪೊಲೀಸರಿಗೆ ಕೊರೋನಾ ಸೋಂಕು

Pinterest LinkedIn Tumblr


ಬೆಂಗಳೂರು(ಜು.16): ರಾಜ್ಯದಲ್ಲಿ ಕೊರೋನಾ ವೈರಸ್‌ ವಿರುದ್ಧ ಪೊಲೀಸರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಪೊಲೀಸರನ್ನು ಕೊರೋನಾ ವಾರಿಯರ್ಸ್‌ ಎಂದು ಕರೆಯಲಾಗುತ್ತದೆ. ಈಗಾಗಲೇ ರಾಜ್ಯದ ಅನೇಕ ಪೊಲೀಸರಿಗೆ ಈ ಸೋಂಗು ತಗುಲಿದೆ. ಪ್ರತಿನಿತ್ಯ ಹಲವರಿಗೆ ಸೋಂಕು ತಗುಲುತ್ತಲೇ ಇದೆ. ಇನ್ನಲವರು ಕೊರೋನಾದಿಂದ ತಮ್ಮ ಪ್ರಾಣವನ್ನು ಬಿಟ್ಟಿದ್ದಾರೆ.

ಹೌದು, ರಾಜ್ಯ ಪೊಲೀಸರನ್ನು ಕೊರೋನಾ ಬೆಂಬಿಡದಂತೆ ಕಾಡುತ್ತಿದೆ. ಇದುವರೆಗೂ ಮಾರಕ ಕೊರೋನಾ ಸೋಂಕು 720 ಮಂದಿ ಪೊಲೀಸರಿಗೆ ವಕ್ಕರಿಸಿದೆ. ಇಂದು ಹಲವು ಪೊಲೀಸರಿಗೆ ಸೋಂಕು ಪತ್ತೆಯಾದ್ದರಿಂದ ಮಾಗಡಿ ರೋಡ್, ಶಿವಾಜಿನಗರ ಮತ್ತು ಯಶವಂತಪುರ, ಆರ್.​ಟಿ ನಗರ ಠಾಣೆಗಳನ್ನು ಸೀಲ್​​ಡೌನ್ ಮಾಡಲಾಗಿದೆ.

ಆರ್​​.ಟಿ ನಗರ ಪೊಲೀಸ್​ ಠಾಣೆಯಲ್ಲಿ ಒಟ್ಟ 14 ಮಂದಿ ಸಿಬ್ಬಂದಿಗೆ ಸೋಂಕು ಬಂದಿದೆ. ಒಟ್ಟು 720 ಮಂದಿ ಪೈಕಿ 418 ಪೊಲೀಸರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ವಾರ್ಜ್​​ ಆಗಿದ್ದಾರೆ. ಹಾಗೆಯೇ 300 ಕ್ಕೂ ಅಧಿಕ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 1200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಸದ್ಯ ಕ್ವಾರಂಟೈನ್​​ನಲ್ಲಿದ್ಧಾರೆ.

ಪೊಲೀಸ್ ಸಿಬ್ಬಂದಿಯಲ್ಲಿ ಸಹ ಕೊರೋನಾ ವೈರಸ್​ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ನಿಯಂತ್ರಿಸುವುದು ಕಷ್ಟಕರ ಎನ್ನುವಂತಾಗಿದೆ. ಹೀಗಾಗಿ ಪೊಲೀಸ್ ಸಿಬ್ಬಂದಿಯಲ್ಲಿ ಭಾರೀ ಆತಂಕ ಮನೆ ಮಾಡಿದೆ. ಕೆಲಸಕ್ಕೆ ಹೋಗಬೇಕಾದರೂ ಯೋಚಿಸುವಂತಾಗಿದೆ.

ಹೀಗಿರುವಾಗಲೇ ಕೆಲಸ ಮಾಡುತ್ತಾ ಪೊಲೀಸರಿಗೆ ಸೋಂಕು ತಗುಲಿದ್ದರೂ ಸಹ ಸರ್ಕಾರ ಅವರಿಗೆ ಉಚಿತ ಪರೀಕ್ಷೆ ನೀಡುವುದಿಲ್ಲವಂತೆ. ಬದಲಿಗೆ 1500 ರೂ. ಪಾವತಿಸಲೇಬೇಕಂತೆ.

ರಾಜ್ಯದಲ್ಲಿ ಪೊಲೀಸರಿಗೆ ಹೆಚ್ಚೆಚ್ಚು ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಪೊಲೀಸ್ ಠಾಣೆಗಳಲ್ಲಿ ಕೊವೀಡ್ ಟೆಸ್ಟ್‌ಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಅಕ್ಕ-ಪಕ್ಕದ ಕೆಲವು ಠಾಣಾ ಸಿಬ್ಬಂದಿಗೂ ಜ್ಞಾಪನಾ ಪತ್ರದ ಮೂಲಕ ಪರೀಕ್ಷೆ ನಡೆಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಆದರೆ, ಜ್ಞಾಪನಾ ಪತ್ರದಲ್ಲಿ ಇಚ್ಚೆ ಉಳ್ಳವರು ಹಣ ಪಾವತಿಸಿ ಕೊವೀಡ್ ಟೆಸ್ಟ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಿಳಿಸಲಾಗಿದೆ. ಖಾಸಗಿ ಲ್ಯಾಬ್ ಗೆ ಪ್ರತಿಯೋರ್ವ ಸಿಬ್ಬಂದಿ 1500 ರೂ ಪಾವತಿಸಿ ಕೊವೀಡ್ ಟೆಸ್ಟ್ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಹೀಗಾಗಿ ತಿಂಗಳಿಡಿ ಬೀದಿಯಲ್ಲಿ ಕೊರೋನಾ ಸಂಬಂಧ ಕೆಲಸ ಮಾಡುತ್ತಿರುವ ಪೊಲೀಸರಿಗೂ ಸರ್ಕಾರ ಉಚಿತವಾಗಿ ಪರೀಕ್ಷೆ ಮಾಡಿಸುವುದಿಲ್ಲವೇ? ಎಂಬ ಆಕ್ರೋಶ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Comments are closed.