ಬೆಂಗಳೂರು(ಜು.08): ಒಂದೇ ತಿಂಗಳಿನಲ್ಲಿ ಎಲ್ಲಾ ಗುತ್ತಿಗೆ ವೈದ್ಯರನ್ನು ಖಾಯಂ ಮಾಡಲು ಆದೇಶ ಹೊರಡಿಸುತ್ತೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ನೀಡಿದರು. ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ಗುತ್ತಿಗೆ ವೈದ್ಯರೊಂದಿಗೆ ಮಾತುಕತೆ ನಡೆಸಿದ ಶ್ರೀರಾಮುಲು, ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಿಮ್ಮೊಂದಿಗಿದೆ. ಯಾವುದೇ ಕಾರಣಕ್ಕೂ ಕೊಟ್ಟ ಭರವಸೆಯನ್ನು ರಾಗಿ ಕಾಳಿನಷ್ಟೂ ಬದಲಾಯಿಸುವುದಿಲ್ಲ ಎಂದರು.
2017ರಿಂದ ಗುತ್ತಿಗೆ ವೈದ್ಯರನ್ನು ಖಾಯಂ ಮಾಡುವ ಕೆಲಸ ಆಗಿಲ್ಲ. ಮಂಗಳವಾರ ನಡೆದ ಸಭೆಯಲ್ಲಿ ಗುತ್ತಿಗೆ ವೈದ್ಯರನ್ನು ಖಾಯಂ ಮಾಡಲು ತೀರ್ಮಾನ ಮಾಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಬದಲಾವಣೆ ಮಾಡಬೇಕಿದೆ. ನೀವು ಕಷ್ಟ ಕಾಲದಲ್ಲಿ ಜನರ ಸೇವೆ ಮಾಡಿದ್ದೀರಿ. ಒಂದು ತಿಂಗಳಿನಲ್ಲಿ 507 ಮಂದಿ ಗುತ್ತಿಗೆ ವೈದ್ಯರನ್ನು ಖಾಯಂ ಮಾಡಲಾಗುವುದು. ಈ ಕುರಿತು ನಾಳೆಯೇ ಆದೇಶ ಹೊರಡಿಸುತ್ತೇನೆ ಎಂದರು ಶ್ರೀರಾಮುಲು.
ಇನ್ನು, ಸಚಿವ ಶ್ರೀರಾಮುಲು ಭರವಸೆ ನೀಡಿದ ಬಳಿಕ ಗುತ್ತಿಗೆ ವೈದ್ಯರು ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ಧಾರೆ. ಜತೆಗೆ ಒಂದು ತಿಂಗಳೊಳಗೆ ಪರ್ಮನೆಂಟ್ ಮಾಡುತ್ತೇವೆ ಎಂದ ಸಚಿವರಿಗೆ ಧನ್ಯವಾದಗಳು ತಿಳಿಸಿದ್ದಾರೆ.
ಈ ಹಿಂದೆಯೇ ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದಾಗ 1944 ಗುತ್ತಿಗೆ ವೈದ್ಯರನ್ನು ಖಾಯಂ ಮಾಡಿದ್ದರು. ಈಗ ಇವರ ಅವಧಿಯಲ್ಲೇ ಮತ್ತೀಗ 507 ಮಂದಿ ಗುತ್ತಿಗೆ ವೈದ್ಯರನ್ನು ಖಾಯಂ ಮಾಡಲು ಮುಖ್ಯಮಂತ್ರಿ ಒಪ್ಪಿದ್ದಾರೆ ಎನ್ನಲಾಗಿದೆ.
Comments are closed.