ಕರ್ನಾಟಕ

ಸರ್ಕಾರ ಮನವಿ ಮಾಡಿದರೂ ಬೆಂಗಳೂರಿನಿಂದ ಊರುಗಳತ್ತ ಹೊರಟ ಜನತೆ

Pinterest LinkedIn Tumblr


ಬೆಂಗಳೂರು; ಕೊರೋನಾ ಮಹಾಮಾರಿ ಬೆಂಗಳೂರಿಗರಲ್ಲಿ ಎಷ್ಟರ ಮಟ್ಟಕ್ಕೆ ಭಯ ಹುಟ್ಟಿಸಿದೆ ಅಂದ್ರೆ, ಬದುಕಿದರೆ ವ್ಯವಸಾಯ ಮಾಡಿಕೊಂಡು ಊರಲ್ಲಿ ಇರೋಣ, ಈ ಬೆಂಗಳೂರು ಸಹವಾಸವೇ ಸಾಕು ಅಂತಾ ಗಂಟು ಮೂಟೆ ಸಮೇತ ಊರ ದಾರಿ ಹಿಡಿದಿದ್ದಾರೆ.

ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ಅವ್ಯಾಹಕವಾಗಿ ಹರಡುತ್ತಲೇ ಇದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆಯಂತು ಪ್ರತಿದಿನ ಸಾವಿರದ ಲೆಕ್ಕದಲ್ಲಿ ದಾಟುತ್ತಿದೆ. ಈ ನಡುವೆ ಅದೆಷ್ಟೋ ಜನ ಕೆಲಸ ಕಳೆದುಕೊಂಡು ಕೂಲಿಯಿಲ್ಲದೆ ಕೂಳು ಇಲ್ಲ ಅಂತಾ ಬೆಂಗಳೂರು ಬಿಟ್ಟು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ತಮ್ಮೂರ ದಾರಿ ಹಿಡಿದಿದ್ದಾರೆ. ಜನರು ಬೆಂಗಳೂರು ಬಿಡುವ ವಿಷಯ ತಿಳಿದು ಮುಖ್ಯಮಂತ್ರಿಯಾಧಿಯಾಗಿ ಸರ್ಕಾರದ ವಿವಿಧ ಸಚಿವರು ಪರಿಪರಿಯಾಗಿ ಬೇಡಿಕೊಂಡರೂ, ಜನರು ಊರುಗಳತ್ತ ಮುಖ ಮಾಡಿದ್ದಾರೆ‌.

ಕಳೆದ 10- 20 ವರ್ಷಗಳ ಹಿಂದೆ ಜೀವನ ಕಟ್ಟಿಕೊಳ್ಳಲು ಹಳ್ಳಿ ಬಿಟ್ಟು ಬೆಂಗಳೂರು ಪಟ್ಟಣ ಸೇರಿದ್ದ ಜನ ಈಗ ಮತ್ತೆ ಹಳ್ಳಿ ದಾರಿ ಹಿಡಿದಿದ್ದಾರೆ. ವೈರಸ್ ತಡೆಗಟ್ಟುವಲ್ಲಿ ಸರ್ಕಾರದ ಮೇಲೆ‌ ನಂಬಿಕೆ ಕಳೆದುಕೊಂಡ ಜನರು, ಸರ್ಕಾರದ ಘೋಷಣೆಗಳು ಯಾವುದು ನಮಗೆ ತಲುಪುತ್ತಿಲ್ಲ ಎಂದು ತಮ್ಮೂರುಗಳಿಗೆ ಹೊರಟಿದ್ದಾರೆ.

ಇಷ್ಟು ದಿನ ಬೆಂಗಳೂರು ನಮಗೆ ಜೀವನ ಕೊಡ್ತು, ಆದ್ರೆ ಈಗ ನಮ್ಮ ಜೀವದ ಮೇಲೆ ಭಯ ಶುರುವಾಗಿದೆ. ನಮ್ಮೂರಿಗೆ ಹೋಗಿ ಕೂಲಿ ನಾಲಿ ಮಾಡಿಕೊಂಡು, ವ್ಯವಸಾಯ ಮಾಡಿಕೊಂಡು ಬದುಕು ಕಟ್ಟಿಕೊಳ್ತಿವಿ. ಒಂದು ವೇಳೆ ವ್ಯವಸ್ಥೆ ಸರಿಹೋದರೆ ಮತ್ತೆ ಬೆಂಗಳೂರಿಗೆ ಬರುವ ಬಗ್ಗೆ ಯೋಚನೆ ಮಾಡ್ತೀವಿ ಅಂತ ಕೆಲವರು ಹೇಳುದರೆ, ನಮಗೆ ಈ ಬೆಂಗಳೂರಿನ ಸಹವಾಸವೇ ಬೇಡಪ್ಪ ಅಂತಾ ಕೆಲವರು ಗಂಟು ಮೂಟೆ ಕಟ್ಟಿಕೊಂಡು ಶಾಶ್ವತವಾಗಿ ಬೆಂಗಳೂರು ತೊರೆಯುತ್ತಿದ್ದಾರೆ.

ಕೆಟ್ಟು ಪಟ್ಟಣ ಸೇರು ಅನ್ನೋ ಒಂದು ಕಾಲದ ಗಾದೆ ಮಾತನ್ನು ಕೊರೋನಾ ವೈರಸ್ ಬುಡಮೇಲು ಮಾಡಿಬಿಟ್ಟಿದೆ. ವೈರಸ್‌ನಿಂದ ಕಂಗೆಟ್ಟ ಅದೆಷ್ಟೋ ಜನ ಈ ಬೆಂಗಳೂರಿನ ಸಹವಾಸವೇ ಸಾಕು ಅಂತ ತಮ್ಮೂರುಗಳತ್ತ ಮುಖ ಮಾಡಿದ್ದಾರೆ.

Comments are closed.