ಕರ್ನಾಟಕ

ಅಂಗನವಾಡಿ ಕಾರ್ಯಕರ್ತೆಗೆ ಕೊರೋನಾ ; ಆಹಾರ ಸಾಮಾಗ್ರಿ ಪಡೆದಿದ್ದ 56 ಜನ ಕ್ವಾರಂಟೈನ್

Pinterest LinkedIn Tumblr


ಗದಗ(ಜುಲೈ.06): ಮುದ್ರಣ ಕಾಶಿ ಗದಗ ಜಿಲ್ಲೆಯ ಗರ್ಭಿಣಿ, ಬಾಣಂತಿಯರ ಎದೆಯಲ್ಲಿ ಢವ ಢವ ಆರಂಭವಾಗಿದೆ. ಕೊರೋನಾ ಪಾಸಿಟಿವ್ ದೃಢಪಟ್ಟ ಅಂಗನವಾಡಿ ಕಾರ್ಯಕರ್ತೆಯಿಂದ ರೇಷನ್ ಪಡೆದಿರುವ ಗರ್ಭಿಣಿ ಹಾಗೂ ಬಾಣಂತಿಯರೀಗ ಆತಂಕದಲ್ಲಿದ್ದಾರೆ.

ಜಿಲ್ಲೆಯ ನರಗುಂದ ಪಟ್ಟಣದ ಗಾಡಿ ಓಣಿ ನಿವಾಸಿಯಾದ 36 ವರ್ಷದ ಪಿ-18277 ಅಂಗನವಾಡಿ ಟೀಚರ್. ಇವರು ನರಗುಂದ ತಾಲೂಕಿನ ಸಿದ್ದಾಪುರ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿದ್ದಾಪುರ ಗ್ರಾಮದ ಮಕ್ಕಳು, ಗರ್ಭಿಣಿ ಮಹಿಳೆಯರು, ಬಾಣಂತಿಯರಿಗೆ ಪೌಷ್ಟಿಕಾಂಶದ ಆಹಾರ ಕಿಟ್ ವಿತರಣೆ ಮಾಡಿದ್ದಾರೆ. ಅಂಗನವಾಡಿಗೆ ಕರೆಸಿ ಕೆಲವು ಜನರಿಗೆ ಆಹಾರ ಕಿಟ್ ವಿತರಣೆ ಮಾಡಿದ್ರೆ, ಇನ್ನೂ ಮನೆ ಮನೆ ತೆರಳಿ ಆಹಾರದ ಕಿಟ್ ವಿತರಣೆ ಮಾಡಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಗೆ ಕೊರೋನಾ ಪಾಸಿಟಿವ್ ದೃಢವಾಗಿದ್ದು, ಅವರ ಸಂಪರ್ಕದಲ್ಲಿ ಇಬ್ಬರು ಗರ್ಭಿಣಿಯರು ಹಾಗೂ ಇಬ್ಬರು ಬಾಣಂತಿಯರು ಸೇರಿದಂತೆ 50 ಕ್ಕೂ ಹೆಚ್ಚು ಸಿದ್ದಾಪುರ ಗ್ರಾಮದ ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ.

ಹುಬ್ಬಳ್ಳಿಯ ಹೊಸೂರು ಡಿಪೋ ದಲ್ಲಿ ಸಾರಿಗೆ ಸಂಸ್ಥೆಯ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ 39 ವರ್ಷದ ಪಿ- 15320 ಸೋಂಕು ದೃಡವಾಗಿದೆ. ಈತ ನರಗುಂದ ಪಟ್ಟಣದ ಗಾಡಿ ಓಣಿಯ ನಿವಾಸಿಯಾಗಿದ್ದು, ಈತನ ಸಹೋದರಿ ಅಂಗನವಾಡಿ ಕಾರ್ಯಕರ್ತೆ ಸೇರಿದಂತೆ ಪುಟಾಣಿ ಮಕ್ಕಳಿಗೆ ಸಹ ಕೊರೋನಾ ವಕ್ಕರಿಸಿಕೊಂಡಿದೆ. ಪ್ರಥಮ ಸಂಪರ್ಕಿತರಾದ ಅವರ ಇಬ್ಬರು ಮಕ್ಕಳು, ತಾಯಿ, ಇಬ್ಬರು ಸಹೋದರಿಯರು, ಸಹೋದರಿಯ ಮಗಳು, ಜತೆಗೆ ಇವರು ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ಇರುವುದರಿಂದ ಮನೆಯ ಮಾಲೀಕ ಮತ್ತು ಅವರ ಪುತ್ರ ಹಾಗೂ ಪಕ್ಕದ ಮನೆಯ ಇಬ್ಬರಿಗೆ ಸೇರಿ ಒಟ್ಟು 10 ಜನರಿಗೆ ಸೋಂಕು ತಗುಲಿದೆ. ಹೀಗಾಗಿ ಕಂಡಕ್ಟರ್ ತಂದ ವೈರಸ್ ನರಗುಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಹ ಆತಂಕಕ್ಕೆ ಕಾರಣವಾಗಿದೆ.

ನರಗುಂದ ಪಟ್ಟಣದ ಗಾಡಿ ಓಣಿಯನ್ನು ಕಂಟೈನ್ ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ನರಗುಂದ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕೊರೋನಾ ಸೋಂಕಿತರು ಹೆಚ್ಚಾಗುತ್ತಾರೆ ಎನ್ನುವ ಆತಂಕದ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಅವರು ಅಧಿಕಾರಿಗಳ ಸಭೆ ನಡೆಸಿ, ಕ್ವಾರಂಟೈನ್ ಮಾಡಲು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಸಿದ್ದಾಪುರ ಗ್ರಾಮಕ್ಕೆ ನರಗುಂದ ತಹಶೀಲ್ದಾರ್ ಮಹೇಂದ್ರ ಭೇಟಿ ನೀಡಿ ಗರ್ಭಿಣಿಯರು ಹಾಗೂ ಬಾಣಂತಿಯರು ಎಚ್ಚರಿಕೆಯಿಂದ ಇರಬೇಕು ಹಾಗೂ ಮನೆಯಲ್ಲಿ ಕ್ವಾರಂಟೈನ್ ವ್ಯವಸ್ಥೆ ಇರದಿದ್ರೆ ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಿದ್ದಾರೆ. ಬಂಡಾಯ ನಾಡು ನರಗುಂದದ ಜನರು ಆತಂಕದಲ್ಲಿದ್ದಾರೆ.

Comments are closed.