ಕರ್ನಾಟಕ

ಈ ಜಿಲ್ಲೆಯಲ್ಲಿ ಮದುವೆ, ಸೀಮಂತ ಕಾರ್ಯಕ್ರಮಗಳಿಗೆ ಅನುಮತಿ ನಿಷೇಧ

Pinterest LinkedIn Tumblr


ಬಾಗಲಕೋಟೆ: ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಡೆಯುವ ಮದುವೆ, ಸೀಮಂತ ಕಾರ್ಯಕ್ರಮಗಳನ್ನು ಮುಂದಿನ ಆದೇಶದ ವರೆಗೆ ನಿಷೇಧಿಸಲಾಗಿದ್ದು, ರಿಜಿಸ್ಟರ್‌ ಮದುವೆಗೆ ಮಾತ್ರ ಅವಕಾಶವಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನ ಭಾಗವಹಿಸುತ್ತಿದ್ದು, ಇದರ ಪರಿಣಾಮ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೂ ಕೊರೋನಾ ಸೋಂಕು ಹರಡುತ್ತಿರುವುದನ್ನು ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು, ಮದುವೆ ಸಮಾರಂಭಕ್ಕೆ ಅನುಮತಿ ನೀಡಬಾರದೆಂದು ತಿಳಿಸಿದ ಹಿನ್ನೆಲೆಯಲ್ಲಿ ನಿಷೇಧಕ್ಕೆ ಮುಂದಾಗಿರುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ.

ಮದುವೆ ಕಾರ್ಯಕ್ರಮಗಳಿಂದ ಕೊರೋನಾ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಮದುವೆ ಸಮಾರಂಭದಿಂದ ಜಿಲ್ಲೆಯ ಕಲಾದಗಿ ಮತ್ತು ಇಲಕಲ್ಲದಲ್ಲಿ 60ಕ್ಕೂ ಹೆಚ್ಚು ಪ್ರಕರಣಗಳು ಬಂದಿವೆ. ಇನ್ನು ಬಾದಾಮಿ ಸೀಮಂತ ಕಾರ್ಯಕ್ರಮದಿಂದ 15, ಶವ ಸಂಸ್ಕಾರದಿಂದ 20ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿರುವದರಿಂದ ಶವಸಂಸ್ಕಾರಕ್ಕೆ 20 ಜನರಿಗೆ ಸೀಮಿತಗೊಳಿಸಿ ಉಳಿದೆಲ್ಲ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದನ್ನು ನಿಷೇಧಿಸಲಾಗಿದೆ.

ಮದುವೆ ಮಾಡಿಕೊಳ್ಳುವವರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸೀಮಿತ ಸಂಖ್ಯೆಯಲ್ಲಿ ಆಗಮಿಸಿ ಮದುವೆ ಮಾಡಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

Comments are closed.