ಕರ್ನಾಟಕ

ಯುವತಿಯೊಂದಿಗೆ ಆಕ್ರಮ ಸಂಬಂಧ- ದೂರು ನೀಡಲು ಹೋದ ಹೆಂಡತಿಯ ಹತ್ಯೆ

Pinterest LinkedIn Tumblr


ಬೆಂಗಳೂರು: ರಸ್ತೆಯಲ್ಲಿ ಅಟ್ಟಾಡಿಸಿ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಪತಿಯನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್ ಬಂಧಿತ ಆರೋಪಿ. ಮಂಜುನಾಥ್ ಮಂಗಳವಾರ ರಾತ್ರಿ ಬೀದಿಯಲ್ಲಿ ಪತ್ನಿ ಹೇಮಾಳನ್ನು ಅಟ್ಟಾಡಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದನು. ಈ ಕುರಿತು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಡುತ್ತಿದ್ದರು. ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಉತ್ತರ ವಿಭಾಗ ಡಿಸಿಪಿ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದು, ಆರೋಪಿ ಮಂಜುನಾಥ್ ಪ್ರತಿನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದನು. ಅಲ್ಲದೇ ಬೇರೆ ಯುವತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಇದರಿಂದ ಮೃತ ಹೇಮಾ ಪತಿಯಿಂದ ವಿಚ್ಛೇದನ ಪಡೆಯಲು ಚಿಂತನೆ ನಡೆಸಿದ್ದಳು. ಈ ಬಗ್ಗೆ ಆರೋಪಿ ಮಂಜುನಾಥ್ ಜೊತೆ ಚರ್ಚಿಸಿದ್ದಳು. ಆದರೆ ಆರೋಪಿ ಪತ್ನಿಗೆ ವಿಚ್ಛೇದನ ಕೊಡಲು ಒಪ್ಪಿಕೊಂಡಿಲ್ಲ ಎಂದು ತಿಳಿಸಿದರು.

ಅಷ್ಟೇ ಅಲ್ಲದೇ ಆರೋಪಿ ಮನೆಯಲ್ಲಿ ಕುಡಿದು ಪದೇ ಪದೇ ಗಲಾಟೆ ಮಾಡುತ್ತಿದ್ದನು. ಕಳೆದ ಎರಡು ದಿನಗಳಿಂದ ಗಲಾಟೆಯಾಗುತ್ತಿತ್ತು. ಮಂಗಳವಾರ ಸಂಜೆ ಪೊಲೀಸ್ ಠಾಣೆಗೆ ದೂರು ಕೊಡುತ್ತೀನಿ ಎಂದು ಹೇಮಾ ಮನೆಯಿಂದ ಹೊರ ಬಂದಿದ್ದಾಳೆ. ಈ ವೇಳೆ ನಿನ್ನ ಕೊಲೆ ಮಾಡಿ ನಾನೇ ಸ್ಟೇಷನ್‍ಗೆ ಹೋಗುತ್ತೀನಿ ಎಂದು ಪತ್ನಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆ ವೇಳೆ ಪತಿಯಿಂದ ತಪ್ಪಿಸಿಕೊಂಡು ಹೇಮಾ ಹೋಗುತ್ತಿದ್ದಳು. ಆಗ ರಸ್ತೆಯಲ್ಲಿ ಹಿಂಬಾಲಿಸಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಡಿಸಿಪಿ ಪ್ರಕರಣದ ಬಗ್ಗೆ ವಿವರಿಸಿದರು.

ಏನಿದು ಪ್ರಕರಣ?
ಕುಣಿಗಲ್ ಮೂಲದ ಹೇಮಾಗೆ ಆರೋಪಿ ಮಂಜುನಾಥ್ ಜೊತೆ 12 ವರ್ಷಗಳ ಹಿಂದೆ ಮದುವೆಯಾಗಿತ್ತು. ಮೃತ ಹೇಮಾ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಮಂಗಳವಾರ ಸಂಜೆ ಹೇಮಾ ಪತಿಯ ವಿರುದ್ಧ ಪೊಲೀಸ್ ಠಾಣೆಗೆ ಹೋಗುತ್ತಿದ್ದಳು. ಈ ವೇಳೆ ಆರೋಪಿ ಹೇಮಾಗೆ ಚಾಕುವಿನಿಂದ ಇರಿದಿದ್ದನು. ನಂತರ ಗಾಬರಿಯಿಂದ ಪತ್ನಿ ಹೇಮಾ ಮನೆಯಿಂದ ಹೊರಗೆ ಓಡಿ ಬಂದಿದ್ದಾಳೆ. ಆದರೆ ಪತಿ ಆಕೆಯನ್ನು ಹಿಂಬಾಲಿಸಿಕೊಂಡು ಮನೆಯಿಂದ ಬೀದಿಗೆ ಬಂದಿದ್ದಾನೆ. ಅಲ್ಲದೇ ಬೀದಿಯಲ್ಲಿ ಅಟ್ಟಾಡಿಸಿ ಪತ್ನಿ ಹೇಮಾ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದನು. ಬಳಿಕ ಆರೋಪಿ ಎಸ್ಕೇಪ್ ಆಗಿದ್ದನು.

ಮಾಹಿತಿ ತಿಳಿದು ರಾಜಗೋಪಾಲನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ರವಾನಿಸಿದ್ದರು. ಈ ಕುರಿತು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.

Comments are closed.