ಕರ್ನಾಟಕ

ಕೊರೊನಾ ಭೀತಿ: ಬೆಂಗಳೂರಿನಲ್ಲಿ ಮತ್ತೋರ್ವ ಸೋಂಕಿತೆ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು: ಕೊರೊನಾಗೆ ಭಯ ಪಡಬೇಡಿ, ಆತ್ಮಹತ್ಯೆಗೆ ಶರಣಾಗಬೇಡಿ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಶುಕ್ರವಾರ ಮನವಿ ಮಾಡಿಕೊಂಡಿದ್ದಾರೆ. ಕಾರಣ ನಗರದಲ್ಲಿ 60 ವರ್ಷದ ಕೋವಿಡ್‌ ಸೋಂಕಿತೆಯೊಬ್ಬರು ಕೆಸಿ ಜನರಲ್‌ ಆಸ್ಪತ್ರೆಯ ಶೌಚಾಲಯದಲ್ಲಿ ಶುಕ್ರವಾರ ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕುಣಿಗಲ್‌ ಮೂಲದ ಈ ಮಹಿಳೆ ನಗರದ ರಾಜಗೋಪಾಲ ನಗರದಲ್ಲಿ ವಾಸವಾಗಿದ್ದರು. ಜೂನ್‌ 18 ರಂದು ಇವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ತಮ್ಮ ಸೊಸೆ ಮತ್ತು ಮೊಮ್ಮಗನ ಜೊತೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ‘ಮಹಿಳೆ ಚಿಕಿತ್ಸೆ ಸ್ಪಂದಿಸುತ್ತಿದ್ದರು ಮತ್ತು ಅವರಲ್ಲಿ ಯಾವುದೇ ರೀತಿಯ ಒತ್ತಡದ ಲಕ್ಷಣವೂ ಕಾಣಿಸಿರಲಿಲ್ಲ. ಬಹುಶಃ ಅವರು ಭಯಗೊಂಡು ಒತ್ತಡಕ್ಕೊಳಗಾಗಿರುವ ಸಾಧ್ಯತೆ ಇದೆ,’ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ಶುಕ್ರವಾರ ಮುಂಜಾನೆ 2.30ರ ಸುಮಾರಿಗೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಿಳೆ ಸಾವಿನ ನಂತರ ಮಾಧ್ಯಮಗ ಜೊತೆ ಮಾತನಾಡಿರುವ ಭಾಸ್ಕರ್‌ ರಾವ್‌, ದಯವಿಟ್ಟು ಕೊರೊನಾ ವೈರಸ್‌ ಭಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಜೀವ ಉಳಿಸಲು ಸರಕಾರ ಸಕಲ ಪ್ರಯತ್ನ ನಡೆಸುತ್ತಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದು ಕೊರೊನಾ ಭಯದಲ್ಲಿ ನಗರದಲ್ಲಿ ನಡೆದ ಮೂರನೇ ಸಾವಾಗಿದೆ. ಸೋಮವಾರ 50 ವರ್ಷದ ಕೆಎಸ್‌ಆರ್‌ಪಿ ಕಾನ್‌ಸ್ಟೇಬಲ್‌ ಒಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಬಸ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೂ ಮೊದಲು 50 ವರ್ಷದ ವ್ಯಕ್ತಿಯೊಬ್ಬರು ವಿಕ್ಟೋರಿಯಾ ಆಸ್ಪತ್ರೆಯ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು.

Comments are closed.