ಕರ್ನಾಟಕ

ಆನ್​ಲೈನ್ ತರಗತಿಯಲ್ಲಿಯೇ ಶಿಕ್ಷಕಿಗೆ ಲೈಂಗಿಕ ಕಿರುಕುಳ

Pinterest LinkedIn Tumblr


ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಲಾಕ್ ಡೌನ್ ಸಡಿಲಿಕೆ ಮಾಡಿದರೂ ಕಾಲೇಜುಗಳು ತೆರೆಯುತ್ತಿಲ್ಲ. ಈ ನಡುವೆ ಕಾಲೇಜು ವಿದ್ಯಾರ್ಥಿಗಳಿಗೆ ಆನ್​ಲೈನ್ ಕ್ಲಾಸ್ ನಡೆಸಲಾಗುತ್ತಿದೆ. ಆದರೆ, ಆನ್​ಲೈನ್ ಪಾಠ ಮಾಡುವ ಉಪನ್ಯಾಸಕಿಯರಿಗೆ ಕಿರಿಕಿರಿ ಆಗುತ್ತಿರುವ ಆರೋಪಗಳು ಕೇಳಿ ಬರುತ್ತಿವೆ.

ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು ಆನ್​ಲೈನ್ ತರಗತಿಯನ್ನ ಅನೇಕ ಕಾಲೇಜು ಮಂಡಳಿಗಳು ನಡೆಸುತ್ತಿವೆ. ಆದರೆ, ಇದನ್ನೇ ನೆಪ ಮಾಡಿಕೊಂಡು ಕೆಲ ವಿದ್ಯಾರ್ಥಿಗಳು ದುರುಪಯೋಗ ಮಾಡಿಕೊಂಡು ಉಪನ್ಯಾಸಕಿಯರ ಜೊತೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯಲ್ಲಿರೋ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಝೂಮ್ ಆ್ಯಪ್ ಮೂಲಕ ಆನ್​ಲೈನ್ ತರಗತಿ ನಡೆಸುತ್ತಿದ್ದ ವೈದ್ಯಕೀಯ ಉಪನ್ಯಾಸಕಿ ಬಳಿ ಯುವಕ ಅಸಭ್ಯ ವರ್ತನೆ ಮಾಡಿರುವ ಆರೋಪ ಕೇಳಿ ಬಂದಿದೆ. ಕ್ಲಾಸ್ ವೇಳೆ ಯುವಕ ಆ ಉಪನ್ಯಾಸಕಿಗೆ ಅಸಭ್ಯ ಲೈಂಗಿಕ ಪದ ಬಳಕೆ ಮಾಡಿದನೆನ್ನಲಾಗಿದೆ.

ಸದ್ಯ ಜಿಗಣಿ ಪೋಲೀಸ್ ಠಾಣೆಯಲ್ಲಿ ಉಪನ್ಯಾಸಕಿ ದೂರು ನೀಡಿದ್ದು, ಎಫ್​ಐಆರ್ ದಾಖಲಾಗಿದೆ. ಇದಷ್ಟೇ ಅಲ್ಲ, ರಾಜಧಾನಿಯಲ್ಲಿ ಆನ್​ಲೈನ್ ಫ್ರಾಡ್ ಹೆಚ್ಚಾಗಿದೆ. ಟ್ರಾವೆಲ್ ಆಫರ್, ಗಿಪ್ಟ್, ಪೋನ್ ಕಾಲ್ ಮೂಲಕ ಪಂಗನಾಮ ಹಾಕುತ್ತಿರುವ, ಬಣ್ಣ ಬಣ್ಣದ ಮಾತುಗಳಿಂದ ನಂಬಿಸಿ ವಂಚನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.

ಲಾಕ್​ಡೌನ್ ಸಡಿಲಿಕೆ ವೇಳೆ ಹೊರ ಜಿಲ್ಲೆ, ಹೊರರಾಜ್ಯಗಳಿಗೆ ಹೋಗಲು ಜನರು ಪರದಾಡುತ್ತಿರುವುದನ್ನೇ ಬಂಡವಾಳ ಮಾಡಿಕೊಂಡ ಸೈಬರ್ ಖದೀಮರು, ಫ್ಲೈಟ್​ನಲ್ಲಿ ಹೋದ್ರೆ ಬೆಸ್ಟ್ ಎಂದು ಅತಿಯಾಗಿ ನಂಬಿಸಿ ವಂಚಿಸುತ್ತಿದ್ದಾರೆ.

ಬೀದರ್​ನ ಕಿರಣ್ ಎಂಬುವರಿಗೆ ಫ್ಲೈಟ್ ಟಿಕೆಟ್ ನೀಡುತ್ತೇವೆಂದು ಹಿಂದಿಯಲ್ಲಿ ಮಾತನಾಡಿದ್ದ ಅಪರಿಚಿತ ವ್ಯಕ್ತಿ, ಮೆಸೇಜ್ ಮೂಲಕ ಲಿಂಕ್​ವೊಂದನ್ನ ಕಳಿಸಿ ಅಕೌಂಟ್​ನಲ್ಲಿದ್ದ ಹಣ ಎಗರಿಸಿದ್ದಾರೆ.

ಜನವರಿ ತಿಂಗಳಲ್ಲಿ 321, ಫೆಬ್ರವರಿಯಲ್ಲಿ 480, ಮಾರ್ಚ್​ನಲ್ಲಿ 875, ಏಪ್ರಿಲ್​ನಲ್ಲಿ 425 ಮತ್ತು ಮೇ ತಿಂಗಳಲ್ಲಿ 822 ಸೈಬರ್ ಪ್ರಕರಣಗಳು ದಾಖಲಾಗಿದೆ. ಕಳೆದ ತಿಂಗಳೇ ಅತಿ ಹೆಚ್ಚು ಸೈಬರ್ ಅಪರಾಧ ನಡೆದಿರುವುದು ಸ್ಪಷ್ಟವಾಗಿದೆ.

Comments are closed.