ಕರ್ನಾಟಕ

ಕೊರೋನಾ ಸಮುದಾಯದಲ್ಲಿ ಹರಡುವಿಕೆ ಆರಂಭವಾಗಿದೆ: ಡಾ. ಮಂಜುನಾಥ್ ಮಾಹಿತಿ

Pinterest LinkedIn Tumblr


ಬೆಂಗಳೂರು(ಜೂನ್ 23): ಕೊರೊನಾ ಆರ್ಭಟ ಅದೆಷ್ಟೇ ಇದ್ರೂ ಸಮುದಾಯದ ಹರಡುವಿಕೆ ಇನ್ನೂ ಪ್ರಾರಂಭ ಆಗಿಲ್ಲ ಅನ್ನೋದೇ ಇದುವರಗಿನ ಹುಸಿ ಸಮಾಧಾನವಾಗಿತ್ತು. ಆದ್ರೆ ಇದೀಗ ಕೊರೋನಾ ಭರ್ಜರಿಯಾಗಿ ಸಾಮುದಾಯಿಕವಾಗಿ ರುದ್ರತಾಂಡವವಾಡ್ತಿದೆ. ರಾಜ್ಯದಲ್ಲಿ ಕಮ್ಯುನಿಟಿ ಸ್ಪ್ರೆಡ್ ಶುರುವಾಗಿದೆ. ಅಂದರೆ ಕೊನೆಗೂ ಸಮುದಾಯದ ಹರಡುವಿಕೆ ಆತಂಕ ನಿಜವಾಗಿದೆ. ಇದರಿಂದಾಗಿ ಕೊರೊನಾ ಅಟ್ಟಹಾಸ ಈಗ ಮತ್ತಷ್ಟು ತೀವ್ರವಾಗ್ತಿದೆ. ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯರಾದ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಈ ವಿಚಾರ ಸ್ಪಷ್ಟಪಡಿಸಿದ್ದಾರೆ.

ಆದ್ರೆ ಇದೆಲ್ಲಾ ಸಹಜ ಎಂದೂ ಡಾ. ಸಿಎನ್ ಮಂಜುನಾಥ್ ಸ್ಪಷ್ಟಪಡಿಸಿದ್ಧಾರೆ. ಯಾವುದೇ ವೈರಸ್ ಆದರೂ ಅದು ಹೀಗೇ ಬೆಳೆಯುವುದು. ಒಮ್ಮೆ ವಿಪರೀತವಾಗಿ ಏರಿಕೆ ಆದ್ಮೇಲಷ್ಟೇ ಸೋಂಕು ಕಡಿಮೆಯಾಗುವುದು. ಹೊಸ ವೈರಾಣು ಬಂದಾಗ ಸ್ವಾಭಾವಿಕವಾಗಿ ಕಮ್ಯುನಿಟಿ ಸ್ಪ್ರೆಡ್ ಆಗೇ ಆಗುತ್ತದಂತೆ.

ಕೋವಿಡ್-19 ಹೊಸ ವೈರಸ್ ಆಗಿರೋದ್ರಿಂದ ಈಗ ಕಮ್ಯುನಿಟಿ ಸ್ಪ್ರೆಡ್ ಆಗ್ತಿದೆ. ಇದನ್ನು ನಾವು ಎಷ್ಟೇ ಅಲ್ಲ ಎಂದುಕೊಂಡರೂ ಇದೇ ಸತ್ಯ. ಟ್ರಾವೆಲ್ ಹಿಸ್ಟರಿ ಇಲ್ಲದವರು, ಸೋಂಕಿನ ಮೂಲ ಪತ್ತೆಯಾಗದಿರುವವರಲ್ಲೂ ಸೋಂಕು ಕಂಡುಬರ್ತಿದೆ. ಇದೆಲ್ಲಾ ಕಮ್ಯುನಿಟಿ ಸ್ಪ್ರೆಡ್ ಲಕ್ಷಣಗಳು. ಹೊಸಾ ವೈರಸ್ ಬಂದಾಗ ಅದು 6 ತಿಂಗಳವರಗೆ ತನ್ನ ಪ್ರಭಾವ ಹೊಂದಿರುತ್ತದೆ. ನಾವು ಈಗ 4 ತಿಂಗಳು ಮುಗಿಸಿದ್ದೇವೆ, ಇನ್ನೂ ಎರಡು ತಿಂಗಳವರಗೆ ಹೀಗೇ ಪರಿಸ್ಥಿತಿ ಮುಂದುವರೆಯಲಿದೆ. ಇನ್ನೆರಡು ತಿಂಗಳು ಕೊರೊನಾ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿರುತ್ತದೆ ಎನ್ನುತ್ತಾರೆ ಡಾ ಸಿ ಎನ್ ಮಂಜುನಾಥ್.

ಆದ್ರೆ ಕಮ್ಯುನಿಟಿ ಸ್ಪ್ರೆಡ್ ಜೊತೆಗೆ ಒಂದು ಶುಭ ವಿಚಾರವೂ ಇದೆ. ಕಮ್ಯುನಿಟಿ ಸ್ಪ್ರೆಡ್ ಜೊತೆ ಜೊತೆಗೆ ಹರ್ಡ್ ಇಮ್ಯುನಿಟಿ (Herd Immunity) ಕೂಡಾ ಬೆಳೆಯುತ್ತಿದೆ. ಈ ವಿಚಾರ ಐಸಿಎಂಆರ್ ಮತ್ತು ಜಯದೇವ ಆಸ್ಪತ್ರೆಯ ಸಂಶೋಧನೆಯಲ್ಲಿ ತಿಳಿದುಬಂದಿದೆ.

ಇದೆಲ್ಲದರಿಂದ ಪಾರಾಗಲು ಮುನ್ನೆಚ್ಚರಿಕೆ ಕಡ್ಡಾಯ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಬಹಳ ಮುಖ್ಯ. ಈಗ 3 ಅಡಿ ಇರುವ ಸಾಮಾಜಿಕ ಅಂತರವನ್ನು 6 ಅಡಿ ಮಾಡಬೇಕು. ಕೆಮ್ಮು, ಜ್ವರ, ಮೈಕೈನೋವು, ತಲೆನೋವು ನಿರ್ಲಕ್ಷ್ಯ ಮಾಡಬಾರದು ಎಂದು ಡಾ ಸಿ ಎನ್ ಮಂಜುನಾಥ್ ಎಚ್ಚರಿಕೆಯ ಸಂದೇಶಗಳನ್ನ ನೀಡಿದ್ದಾರೆ.

Comments are closed.