ಬೆಂಗಳೂರು(ಜೂ.23): ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಿನ್ನೆ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಮನೆಯ ಅಡುಗೆ ಕೆಲಸದವನಿಗೆ ಕೊರೋನಾ ತಗುಲಿತ್ತು. ಬಳಿಕ ಅವರ 82 ವರ್ಷದ ತಂದೆಗೂ ಕೊರೋನಾ ಇರುವುದು ದೃಢಪಟ್ಟಿತ್ತು. ಈಗ ಸುಧಾಕರ್ ಅವರ ಹೆಂಡತಿ ಮತ್ತು ಮಗಳಿಗೂ ಕೊರೋನಾ ತಗುಲಿರುವುದು ಖಚಿತವಾಗಿದೆ.
ಸಚಿವ ಸುಧಾಕರ್ ಅವರೇ ಟ್ವೀಟ್ ಮಾಡಿ ತನ್ನ ಹೆಂಡತಿ ಹಾಗೂ ಮಗಳಿಗೆ ಕೊರೋನಾ ಇರುವುದನ್ನು ದೃಢಪಡಿಸಿದ್ದಾರೆ.
ಸುಧಾಕರ್ ಮನೆಯಲ್ಲಿ ಒಟ್ಟು 7 ಜನ ಇದ್ದರು. ಸುಧಾಕರ್ ತಂದೆ, ಹೆಂಡತಿ, ಮಗಳು ಹಾಗೂ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮನೆ ಕೆಲಸದವನು. ಇದೀಗ 7 ಜನರಲ್ಲಿ ನಾಲ್ವರಿಗೆ ಕೊರೋನಾ ಸೋಂಕು ಹರಡಿದೆ. ಉಳಿದ ಮೂವರು ಅಂದರೆ ಸಚಿವ ಸುಧಾಕರ್ ಹಾಗೂ ಅವರ ಇಬ್ಬರು ಗಂಡು ಮಕ್ಕಳಿಗೆ ಕೊರೋನಾ ನೆಗೆಟಿವ್ ಬಂದಿದೆ.
ಸಚಿವ ಸುಧಾಕರ್ ಮಗಳಿಗೆ 13 ವರ್ಷ ಎಂದು ತಿಳಿದು ಬಂದಿದೆ. ಲಾಕ್ಡೌನ್ ಇದ್ದ ಹಿನ್ನೆಲೆ ಕುಟುಂಬ ಸದಸ್ಯರು ಎಲ್ಲೂ ಸಹ ಹೊರಗೆ ಹೋಗಿರಲಿಲ್ಲ. ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದರು. ಯಾರನ್ನೂ ಭೇಟಿ ಕೂಡ ಮಾಡಿರಲಿಲ್ಲ. ಆದರೆ ಮನೆ ಕೆಲಸದವನಿಗೆ ಕೊರೋನಾ ಸೋಂಕು ದೃಢಪಟ್ಟ ಬಳಿಕ ಕುಟುಂಬ ಸದಸ್ಯರಿಗೂ ಕೊರೋನಾ ದೃಢಪಟ್ಟಿದೆ.
ನಿನ್ನೆ, ಸುಧಾಕರ್ ಮನೆ ಕೆಲಸದವನಿಗೆ ಕೊರೋನಾ ಸೋಂಕು ಇದೆ ಎಂದು ಗೊತ್ತಾದ ತಕ್ಷಣ, ಸಚಿವರ ಕುಟುಂಬ ಸದ್ಯಸರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿ ಬಂದ ಬಳಿಕ ಸುಧಾಕರ್ ತಂದೆಗೆ ಕೊರೋನಾ ಪಾಸಿಟಿವ್ ಇರುವುದು ಖಚಿತವಾಗಿತ್ತು. ಅವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು, ಉಳಿದ ಕುಟುಂಬ ಸದಸ್ಯರ ವರದಿಯೂ ಸಹ ಬಂದಿದ್ದು, ಸುಧಾಕರ್ ಹೆಂಡತಿ ಮತ್ತು 13 ವರ್ಷದ ಮಗಳಿಗೆ ಕೊರೋನಾ ಸೋಂಕು ಹರಡಿದೆ. ಸದ್ಯ ಸಚಿವ ಸುಧಾಕರ್ ಮತ್ತವರ ಇಬ್ಬರು ಗಂಡು ಮಕ್ಕಳ ವರದಿ ನೆಗೆಟಿವ್ ಬಂದಿದ್ದು, ಕೊರೋನಾದಿಂದ ಪಾರಾಗಿದ್ದಾರೆ.
Comments are closed.