ಕರ್ನಾಟಕ

ಸದ್ಯ ಸಚಿವ ಸಂಪುಟ ಪುನಾರಚನೆ ಇಲ್ಲ: ಆಕಾಂಕ್ಷಿಗಳು ಆಸೆಗೆ ಕೊರೊನಾ ತಣ್ಣೀರು

Pinterest LinkedIn Tumblr

ಬೆಂಗಳೂರು: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಸೇರ್ಪಡೆಗೆ ಕಾತುರರಾಗಿರುವ ಆಕಾಂಕ್ಷಿಗಳ ಆಸೆ ಇನ್ನೂ ಎರಡು ತಿಂಗಳು ಈಡೇರುವ ಸಾಧ್ಯತೆಗಳಿಲ್ಲ. ಕಾರಣ ಕೊರೊನಾ ವೈರಸ್‌!

ಯಡಿಯೂರಪ್ಪ ನೇತೃತ್ವದ ಸರಕಾರ ಮುಂದಿನ ತಿಂಗಳು 26 ರಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಂಪುಟ ವಿಸ್ತರಣೆ ಹಾಗೂ ಪುನಾರಚನೆಗೆ ಕೈ ಹಾಕದಿರಲು ನಿರ್ಧರಿಸಿದ್ದಾರೆ. ವರ್ಷ ಪೂರೈಸಿದ ಬಳಿಕ ಪ್ರತಿಯೊಬ್ಬ ಸಚಿವರ ಸಾಧನಾ ಪರಾಮರ್ಶೆ ನಡೆಯಲಿದೆ. ಆ ಬಳಿಕ ಮೂರರಿಂದ ನಾಲ್ಕು ಮಂದಿ ಹಳಬರು/ಹಿರಿಯರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಡೆದ ಪರಿಷತ್ತಿನ ಚುನಾವಣೆಯಲ್ಲಿ ಸದಸ್ಯರಾಗಿ ಆಯ್ಕೆಯಾಗಿರುವ ಮಾಜಿ ಸಚಿವರಾದ ಎಂ.ಟಿ.ಬಿ. ನಾಗರಾಜ್‌ ಹಾಗೂ ಆರ್‌. ಶಂಕರ್‌ ಸೇರಿದಂತೆ ಉಮೇಶ್‌ ಕತ್ತಿ, ಅರವಿಂದ ಲಿಂಬಾವಳಿ, ಎಸ್‌. ರಾಮದಾಸ್‌, ಮುರುಗೇಶ್‌ ನಿರಾಣಿ, ಜಿ.ಎಚ್‌. ತಿಪ್ಪಾರೆಡ್ಡಿ, ಸಿದ್ದು ಸವದಿ, ದತ್ತಾತ್ರೇಯ ಪಾಟೀಲ್‌ ರೇವೂರ ಸೇರಿದಂತೆ ಅನೇಕ ಮಂದಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಮುಂದೂಡಲು ಒತ್ತಡ

ಈ ಮಧ್ಯೆ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚಳ ನಿಯಂತ್ರಣಕ್ಕೆ ತಲೆಕೆಡಿಸಿಕೊಂಡಿರುವ ಸಿಎಂ, ಸಂಪುಟ ವಿಸ್ತರಣೆ ಕಸರತ್ತಿನ ಬಗ್ಗೆ ಯೋಚಿಸುತ್ತಿಲ್ಲ ಎನ್ನಲಾಗಿದೆ. ಸೋಂಕು ನಿಯಂತ್ರಣಕ್ಕೆ ಬರುವ ತನಕ ಸದ್ಯದ ವ್ಯವಸ್ಥೆಯೇ ಮುಂದುವರಿಯಲಿ ಎಂಬುದು ಯಡಿಯೂರಪ್ಪ ಅವರ ಆಶಯವೂ ಆಗಿದೆ ಎನ್ನಲಾಗಿದೆ.

ಕಳೆದ ಸಲ ಸಂಭವಿಸಿದ ಪ್ರವಾಹ ಹಾಗೂ ಕೊರೊನಾದಿಂದಾಗಿ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಈ ಅವಧಿಯಲ್ಲಿ ತಮ್ಮ ಇಲಾಖೆಗಳಿಗೆ ನಿಗದಿಪಡಿಸಿದ ಅನುದಾನವೂ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗಿಲ್ಲ. ಅನುದಾನ ಕೊರತೆಯಿಂದಾಗಿ ಇಲಾಖೆಗಳ ಮಹತ್ವಕಾಂಕ್ಷೆಯ ಕಾರ್ಯಕ್ರಮಗಳು/ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ. ಕಳೆದ ಒಂದು ವರ್ಷದ ಅವಧಿಯಲ್ಲಿ ದೈನಂದಿನ ಕೆಲಸಗಳು ನಡೆದಿವೆಯೇ ಹೊರತು ಗಮನ ಸೆಳೆಯುವಂತಹ ಕಾರ್ಯಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ. ಹಣ ಇಲ್ಲದೆ ಕೆಲಸ ಅಥವಾ ಸಾಧನೆ ಮಾಡಿ ತೋರಿಸುವುದಾದರೂ ಹೇಗೆ ಎಂಬುದು ಕೆಲವು ಸಚಿವರ ಪ್ರಶ್ನೆಗಳಾಗಿವೆ. ಹೀಗಾಗಿ
ಸಂಪುಟ ಪುನಾರಚನೆ ಅಥವಾ ಸಚಿವರ ಸಾಧನೆ ಪರಾಮರ್ಶೆ ಪ್ರಕ್ರಿಯೆಯನ್ನು ಆರು ತಿಂಗಳು ಮುಂದೂಡಬೇಕೆಂದು ಒತ್ತಾಯಿಸಲು ಕೆಲವು ಸಚಿವರು ಸಿಎಂ ಭೇಟಿಯಾಗಿ ಒತ್ತಡ ಹೇರಲು ನಿರ್ಧರಿಸಿದ್ದಾರೆ.

Comments are closed.