ಕರ್ನಾಟಕ

ರಾಜ್ಯದಲ್ಲಿ ಸಮುದಾಯಕ್ಕೆ ಹರಡಿಲ್ಲ ಕೊರೊನಾ

Pinterest LinkedIn Tumblr


ಬೆಂಗಳೂರು: ಕೊರೊನಾ ವೈರಸ್ ರಾಜ್ಯದಲ್ಲಿ ಸಮುದಾಯ ಮಟ್ಟಕ್ಕೆ ಹರಡಿದೆಯೇ ಎಂಬ ಆತಂಕದ ನಡುವೆ, ಸ್ವಲ್ಪ ಮಟ್ಟಿಗೆ ನಿರಾಳತೆ ಒದಗಿಸಬಲ್ಲ ಮಾಹಿತಿ ಬಂದಿದೆ. ರಾಜ್ಯದಲ್ಲಿ ಜೂನ್‌ 1 ರಿಂದ 14 ರವರೆಗಿನ ಸೋಂಕಿನ ವಿಶ್ಲೇಷಣೆ ನಡೆಸಿದಾಗ, ದ್ವಿತೀಯ ಹಂತದ ಸಂಪರ್ಕದಲ್ಲಿ ಸೋಂಕು ಹರಡಿದ ಪ್ರಕರಣ ಬೆಳಕಿಗೆ ಬಂದಿರುವುದು ಕೇವಲ 1 ಮಾತ್ರ. ಹೀಗಾಗಿ ಸೋಂಕು ಸಮುದಾಯ ಮಟ್ಟ ತಲುಪಿಲ್ಲ ಎಂಬ ಸಂದೇಶ ದೊರಕಿದೆ.

ಸೋಂಕಿತರ ನೇರ ಸಂಪರ್ಕದಲ್ಲಿರುವ ಮಾದರಿ ಪರೀಕ್ಷೆಯನ್ನು ಜೂನ್‌ 1 ರಿಂದ 14 ರವರೆಗೆ ನಡೆಸಲಾಗಿತ್ತು. ಇದರ ಪ್ರಕಾರ ನೇರ ಸಂಪರ್ಕ ಇರುವವರಲ್ಲಿ ಶೇ.9ರಷ್ಟು ಜನರಿಗೆ ಮಾತ್ರ ಪಾಸಿಟಿವ್‌ ವರದಿ ಬಂದಿದೆ. ದ್ವೀತಿಯ ಸಂಪರ್ಕದಲ್ಲಿದ್ದವರಲ್ಲಿ ಒಬ್ಬರಿಗಷ್ಟೇ ಸೋಂಕು ಬಂದಿದೆ.

ನೇರ ಸಂಪರ್ಕದಲ್ಲಿದ್ದ 5513 ಮಾದರಿಯನ್ನು ಪರೀಕ್ಷೆ ನಡೆಸಿದಾಗ 499 ಜನರಲ್ಲಿ ಸೋಂಕು ಪತ್ತೆಯಾಯಿತು. ಸಂಖ್ಯೆ ವಿಚಾರದಲ್ಲಿ ನೋಡಿದರೆ ಇದರಲ್ಲಿ ಬೆಂಗಳೂರಿನ ಪಾಲು ಹೆಚ್ಚು. 2149 ಮಾದರಿಯಲ್ಲಿ 113 (ಶೇ. 5.3) ಜನರಿಗೆ ಪಾಸಿಟಿವ್‌ ದೃಢಪಟ್ಟಿದೆ.

ದ್ವಿತೀಯ ಸಂಪರ್ಕದಲ್ಲಿದ್ದವರ 6992 ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಿದಾಗ ಒಬ್ಬರಲ್ಲಿ ಮಾತ್ರ ಸೋಂಕು ಕಂಡುಬಂದಿದೆ. ಬೆಂಗಳೂರಿನಲ್ಲಿ 2411 ಮಾದರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪ್ರಾಥಮಿಕ ಸಂಪರ್ಕದಲ್ಲಿದ್ದವರ ಪಾಸಿಟಿವ್‌ ಪ್ರಕರಣದಲ್ಲಿ ಶೇ.20.7 ಮಂದಿಯೊಂದಿಗೆ ದಾವಣಗೆರೆ ಮುಂದಿದೆ.

Comments are closed.